ಬಾಗಲಕೋಟೆ:ಪೊಲೀಸ್ ಇಲಾಖೆಯ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಸೇರಿಕೊಂಡು ಬರಡು ಭೂಮಿಯನ್ನು ಅರಣ್ಯವನ್ನಾಗಿ ಮಾರ್ಪಡಿಸಿ ಗಮನ ಸೆಳೆದಿದ್ದಾರೆ.
ಬಾಗಲಕೋಟೆಯ ನವನಗರದ ಪ್ರದೇಶದಲ್ಲಿ ಪೊಲೀಸ್ ಇಲಾಖೆ ಜಿಲ್ಲಾ ಸಶಸ್ತ್ರ ಪಡೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಪರಿಶ್ರಮದಿಂದ ಕೇವಲ 6 ತಿಂಗಳಲ್ಲಿ ಅರಣ್ಯ ಬೆಳೆಸಿ ಸೈ ಎನಿಸಿಕೊಂಡಿದ್ದಾರೆ. ಸುಮಾರು 12 ಸಾವಿರ ವಿವಿಧ ಬಗೆಯ ಸಸಿಗಳನ್ನು ಬೆಳೆಸಲಾಗಿದೆ. ಮಾವಿನ ಹಣ್ಣು, ಪೇರಲೆ, ಸಪೋಟಾ ಹಾಗೂ ನೇರಳೆ ಸೇರಿದಂತೆ ವಿವಿಧ ಬಗೆಯ ಹಣ್ಣುಗಳ ಸಸಿಗಳನ್ನು, ಔಷಧಿಗೆ ಉಪಯುಕ್ತ ಸಸಿಗಳು ಹಾಗೂ ಬೇವು, ಕರಿಬೇವು, ತೆಂಗಿನ ಮರ, ಬಿದರು, ಹೂವಿನ ಗಿಡಗಳನ್ನು ಬೆಳೆಸಿದ್ದಾರೆ.
ಬರಡು ಭೂಮಿಯಲ್ಲಿ ದಟ್ಟಾರಣ್ಯ ಬೆಳೆಸಿ ಸೈ ಎನಿಸಕೊಂಡ ಪೊಲೀಸ್ ಇಲಾಖೆ ಹನಿ ನೀರಾವರಿ ಹಾಗೂ ಕೊಳವೆ ಬಾವಿ ಮೂಲಕ ಸಸಿಗಳಿಗೆ ನೀರು ಒದಗಿಸಿ ಅರಣ್ಯ ಸಂಪತ್ತು ಬೆಳೆಯಲಾಗಿದೆ ಎಂದು ಡಿಎಆರ್ ಪೊಲೀಸ್ ನಿರೀಕ್ಷಕ ಅಡಿವೆಪ್ಪ ವಾರದ ತಿಳಿಸಿದ್ದಾರೆ.
ಬರಡಾಗಿದ್ದ ಭೂಮಿಯಲ್ಲಿ ಏನಾದರೂ ಮಾಡಿ ಪೊಲೀಸ್ ಸಿಬ್ಬಂದಿಗೆ ಹಾಗೂ ಕುಟುಂಬದವರಿಗೆ ಅನುಕೂಲಕರವಾಗಲಿ ಎಂಬ ಉದ್ದೇಶದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಸಾರ ಪರಿಸರ ಬೆಳೆಸುವುದಕ್ಕೆ ಯೋಜನೆ ಮಾಡಿದ್ದಾರೆ.
ಅರಣ್ಯ ಇಲಾಖೆ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯ ಪರಿಣಿತರ ಮೂಲಕ ಸಸಿಗಳನ್ನು ತಂದು ಬೆಳೆಸಿದ್ದಾರೆ. 300ಕ್ಕೂ ಹೆಚ್ಚು ಪೊಲೀಸ್ ತರಬೇತಿ ಪಡೆಯುವ ಸಿಬ್ಬಂದಿ ಹಾಗೂ ಇತರ ಸಿಬ್ಬಂದಿಯ ಪರಿಶ್ರಮದಿಂದ ಇಂತಹ ಅರಣ್ಯ ಬೆಳೆಸುವುದಕ್ಕೆ ಸಾಧ್ಯವಾಗಿದೆ. ಇದರಿಂದ ಉತ್ತಮ ಪರಿಸರ ದೊರಕಿ, ಸಿಬ್ಬಂದಿಗೆ ಆರೋಗ್ಯ ಮತ್ತು ಚೈತನ್ಯ ಸಿಗುವಂತಾಗಿ ನೆಮ್ಮದಿ ಸಿಗಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಸಾರ ತಿಳಿಸಿದ್ದಾರೆ.