ಬಾಗಲಕೋಟೆ:ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ನಡೆಯುತ್ತಿದ್ದ ಹೋರಾಟ ಹಿನ್ನೆಲೆಯಲ್ಲಿ ಬಾಗಲಕೋಟೆ ಖಾಸಗಿ ಹೋಟೆಲ್ನಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಿತು.
ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುಖ್ಯವಾಗಿ ಮೂರು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.
ನಿರ್ಣಯಗಳು ಹೀಗಿವೆ:
- ಡಿ.15ರಂದು ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜದ ಹಾಲಿ-ಮಾಜಿ ಶಾಸಕರ ಸಭೆ. ಈ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗಮಿಸಿ, ಮೀಸಲಾತಿ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು.
- ಪಂಚಮಸಾಲಿ ಮೀಸಲಾತಿ ಚಳುವಳಿ ಪ್ರಾರಂಭವಾಗಿ ಒಂದು ವರ್ಷ ಪೂರ್ಣಗೊಂಡಿದೆ. ಹೀಗಾಗಿ ಚಳುವಳಿ ವರ್ಷಾಚರಣೆಯ ಅಂಗವಾಗಿ ಜ.14ರಂದು ಕೂಡಲ ಸಂಗಮದಲ್ಲಿ ವರ್ಷಾಚರಣೆಯ ಆಚರಣೆ ಸಭೆ ಮಾಡಿ, ಮೀಸಲಾತಿಗಾಗಿ ಏನು ಮಾಡಬೇಕು ಎಂದು ಅಂತಿಮ ತೀರ್ಮಾನ ತೆಗೆದುಕೊಳ್ಳುವುದು.
- ಹಿಂದುಳಿದ ವರ್ಗಗಳ ಆಯೋಗ ಇರುವುದರಿಂದ, ಸುಭಾಷ್ ಅಡಿ ನೇತೃತ್ವದ ಸಮಿತಿಯನ್ನು ರದ್ದುಪಡಿಸಿ, ಈಗ ಇರುವ ಆಯೋಗದ ವರದಿಯನ್ನು ಮುಂದುವರೆಸಬೇಕು.
ಈ ಮೂರು ನಿರ್ಣಯಗಳನ್ನು ಎಲ್ಲರೂ ಸರ್ವಾನುಮತದಿಂದ ಅಂಗೀಕಾರ ಮಾಡಿದ್ದಾರೆ. ವಿಜಯಪುರ ಶಾಸಕಬಸನಗೌಡ ಪಾಟೀಲ್ ಯತ್ನಾಳ್, ಧಾರವಾಡ ಶಾಸಕ ಅರವಿಂದ ಬೆಲ್ಲದ ಹಾಗೂ ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸಮ್ಮುಖದಲ್ಲಿ ವಿವಿಧ ಪ್ರದೇಶಗಳಿಂದ ಆಗಮಿಸಿದ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ಓದಿ:ಹಾವೇರಿ ಆಸ್ಪ್ರತ್ರೆಯ ವಿದ್ಯುತ್ ಸಮಸ್ಯೆ ನಿವಾರಣೆಗೆ ಕ್ರಮ: ಈಟಿವಿ ಭಾರತ ವರದಿ ಫಲಶ್ರುತಿ