ಬಾಗಲಕೋಟೆ:ಕಳೆದ ರಾತ್ರಿ ಸುರಿದ ಧಾರಾಕಾರ ಮಳೆ ಹಾಗೂ ತುಂಬಿ ಹರಿಯುತ್ತಿರುವ ಮಲಪ್ರಭಾ ನದಿಯಿಂದ ಜಿಲ್ಲೆಯ ಬಾದಾಮಿ ತಾಲೂಕಿನಾದ್ಯಂತ ಮತ್ತೆ ಪ್ರವಾಹ ಪರಿಸ್ಥಿತಿ ಎದುರಾಗಿದೆ.
ಉಕ್ಕಿ ಹರಿಯುತ್ತಿರುವ ಮಲಪ್ರಭಾ ನದಿ: ಬಾದಾಮಿಯಲ್ಲಿ 15 ಮನೆಗಳು ಜಲಾವೃತ! - ಮಲಪ್ರಭಾ ಪ್ರವಾಹ
ಕಳೆದ ರಾತ್ರಿ ಸುರಿದ ಧಾರಾಕಾರ ಮಳೆ ಹಾಗೂ ತುಂಬಿ ಹರಿಯುತ್ತಿರುವ ಮಲಪ್ರಭಾ ನದಿಯಿಂದ ಬಾದಾಮಿ ತಾಲೂಕಿನಾದ್ಯಂತ ಮತ್ತೆ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, 15 ಮನೆಗಳು ಜಲಾವೃತವಾಗಿವೆ.
ಮಲಪ್ರಭಾ ಪ್ರವಾಹದಿಂದ ಬಾದಾಮಿ ತಾಲೂಕಿನ ಮನ್ನೇರಿ ಗ್ರಾಮದಲ್ಲಿ 15 ಮನೆಗಳು ಜಲಾವೃತವಾಗಿವೆ. ಉಕ್ಕಿ ಹರಿಯುತ್ತಿರುವ ಮಲಪ್ರಭೆ ನೀರು ಮನ್ನೇರಿ ಗ್ರಾಮದ ಮನೆಯೊಳಗೆ ನುಗ್ಗಿದ್ದು, ನದಿ ತಟದಲ್ಲಿನ ಮನ್ನೇರಿ ಗ್ರಾಮದ ಜನರ ಪರಿಸ್ಥಿತಿ ಅಸ್ತವ್ಯಸ್ತವಾಗಿದೆ. ಮನ್ನೇರಿ, ಬಾದಾಮಿ ತಾಲೂಕಿನ ಚೊಳಚಗುಡ್ಡ, ತಳಕವಾಡ, ಕರ್ಲಕೊಪ್ಪ, ಆಲೂರು ಎಸ್ ಕೆ ಗ್ರಾಮಗಳಿಗೆ ಮಲಪ್ರಭಾ ನೀರು ನುಗ್ಗುತ್ತಿದೆ. ಮಾಜಿ ಸಿಎಂ ಹಾಗೂ ಬಾದಾಮಿ ಶಾಸಕ ಸಿದ್ದರಾಮಯ್ಯ ಅವರು ಇಂದು ಕ್ಷೇತ್ರದ ಪ್ರವಾಹ ಪೀಡಿತ ಹಳ್ಳಿಗಳ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಇದೇ ಗ್ರಾಮಗಳು ಆಗಸ್ಟ್ನಲ್ಲಿ ಉಂಟಾಗಿದ್ದ ಪ್ರವಾಹಕ್ಕೆ ತುತ್ತಾಗಿದ್ದವು. ಇತ್ತ ಮಲಪ್ರಭಾ ನದಿ ಪ್ರವಾಹದಿಂದಾಗಿ ಚೊಳಚಗುಡ್ಡ ಬಸ್ ನಿಲ್ದಾಣ ಹಾಗೂ ಅಕ್ಕ ಪಕ್ಕದ ಗೂಡಂಗಡಿಗಳು ನೀರಿನಲ್ಲಿ ಮುಳುಗಿವೆ.
ಮತ್ತೊಂದೆಡೆ ಪ್ರವಾಹಕ್ಕೆ ಗದಗ- ಬಾದಾಮಿ ರಸ್ತೆ ಹೆದ್ದಾರಿ ಕೂಡಾ ಬಂದ್ ಆಗಿದೆ. ಚೊಳಚಗುಡ್ಡ ಮಾರ್ಗದ ಮೂಲಕ ಬದಾಮಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಸುಳ್ಳ, ಡಾನಕ್ ಶಿರೂರು ಗ್ರಾಮಕ್ಕೂ ನೀರು ನುಗ್ಗಿದ್ದು, 8 ಮನೆಗಳು ಜಲಾವೃತಗೊಂಡಿವೆ. ಗ್ರಾಮಸ್ಥರು ಸುರಕ್ಷತಾ ಸ್ಥಳಗಳಿಗೆ ತಮ್ಮ ಜಾನುವಾರುಗಳೊಂದಿಗೆ ತೆರಳುತ್ತಿದ್ದಾರೆ. ಭಾರಿ ಮಳೆ ಹಿನ್ನೆಲೆಯಲ್ಲಿ ನವೀಲುತೀರ್ಥ ಡ್ಯಾಂ ನಿಂದ ಮಲಪ್ರಭಾ ನದಿಗೆ 35 ಸಾವಿರ ಕ್ಯೂಸೆಕ್ ನೀರು ಹರಿಬಿಟ್ಟಿದ್ದರಿಂದ ಬಾದಾಮಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ.