ಬಾಗಲಕೋಟೆ: ಸಿದ್ದರಾಮೋತ್ಸವಕ್ಕೆ ಹೊರಟಿದ್ದ ಕ್ರೂಸರ್ ವಾಹನ ಪಲ್ಟಿಯಾದ ಪರಿಣಾಮ ಒಬ್ಬ ಸ್ಥಳದಲ್ಲೇ ಮೃತಪಟ್ಟು, 12 ಮಂದಿ ಗಾಯಗೊಂಡ ಘಟನೆ ಹುಬ್ಬಳ್ಳಿ- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯ ಬಾದಾಮಿ ತಾಲೂಕಿನ ಹೂಲಗೇರಿ ಗ್ರಾಮದ ಸಮೀಪ ಸಂಭವಿಸಿದೆ.
ಮುಧೋಳ ವಿಧಾನಸಭಾ ಕ್ಷೇತ್ರದ ಆಲಗುಂಡಿ ಗ್ರಾಮದಿಂದ ದಾವಣಗೆರೆಗೆ ಹೊರಟಿದ್ದ ವಾಹನ ಇದಾಗಿದ್ದು, ಸ್ಥಳದಲ್ಲೇ ಕ್ರೂಸರ್ ಚಾಲಕ ಪ್ರಕಾಶ್ ಬಡಿಗೇರ್ (34) ಮೃತಪಟ್ಟಿದ್ದಾನೆ. ಗಂಭೀರವಾಗಿ ಗಾಯಗೊಂಡವರನ್ನು ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಸ್ಥಳಕ್ಕೆ ಕೆರೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಬು ಅಪ್ಪಾಸಾಬ್ ನದಾಫ್, ಶಿವಪ್ಪ ಚಿಚಕಂಡಿ , ಸೋಮೇಶ್ ಹೊಂಬಾಳೆ, ಸಿದ್ದಪ್ಪ ಪಂಚಗಾವಿ, ಮುತ್ತಪ್ಪ ಗುಂಜಾಗೊಳ, ಮುದಕಪ್ ಹೊಂಬಾಳೆ ಹಾಗೂ ಶ್ರೀಶೈಲ ಮಠಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾಸ್ಪತ್ರೆಗೆ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ್ ಭೇಟಿ ನೀಡಿ, ಮಾಹಿತಿ ಪಡೆದುಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಚಿವ ಗೋವಿಂದ ಕಾರಜೋಳ ಸಂತಾಪ ಸೂಚಿಸಿದ್ದಾರೆ. ದಾವಣಗೆರೆ ಸಿದ್ದರಾಮೋತ್ಸವಕ್ಕೆ ಮುಧೋಳ ತಾಲೂಕಿನ ಆಲಗುಂಡಿ ಗ್ರಾಮದ ಯುವಕರು ತೆರಳುತ್ತಿದ್ದರು. ಈ ವೇಳೆ, ಹೂಲಗೇರಿ ಗ್ರಾಮದ ಬಳಿ ವಾಹನ ಅಪಘಾತಕ್ಕೀಡಾಗಿ, ಚಾಲಕ ಪ್ರಕಾಶ್ ಮೃತಪಟ್ಟಿದ್ದಾನೆ. ಮೃತಪಟ್ಟ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ, ಮೃತ ಪ್ರಕಾಶ್ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ:ಆಂಧ್ರದ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆ: 150ಕ್ಕೂ ಹೆಚ್ಚು ಮಹಿಳಾ ಉದ್ಯೋಗಿಗಳು ಅಸ್ವಸ್ಥ