ಬಾಗಲಕೋಟೆ: ಜಿಲ್ಲೆಗೆ ಅಪ್ಪಳಿಸಿದ ಮಲಪ್ರಭಾ ಹಾಗೂ ಘಟಪ್ರಭಾ ನದಿಗಳ ಪ್ರವಾಹದಿಂದ ಬಾದಾಮಿ ತಾಲೂಕಿನ 43 ಗ್ರಾಮಗಳು ಪ್ರವಾಹಕ್ಕೆ ಒಳಗಾಗಿದ್ದು, ಪ್ರವಾಹದಿಂದ ಸಂಕಷ್ಟಕ್ಕೀಡಾದ ಜನ ಜಾನುವಾರುಗಳ ರಕ್ಷಣೆಗೆ ಹಾಗೂ ಪ್ರವಾಹ ಪೀಡಿತರ ಸಮಸ್ಯೆಗಳಿಗೆ ಕೂಡಲೇ ಅಧಿಕಾರಿಗಳು ಸ್ಪಂದಿಸಬೇಕು ಎಂದು ಬಾದಾಮಿ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ಅಧಿಕಾರಿಗಳ ಜೊತೆ ಸಿದ್ಧರಾಮಯ್ಯ ಸಭೆ ಜಿಲ್ಲಾ ಪಂಚಾಯಿತಿ ಭವನದಲ್ಲಿ ಅಧಿಕಾರಿಗಳ ಸಭೆ ಕರೆದು ಮಾತನಾಡಿದ ಅವರು, ಪ್ರವಾಹದ ಹಾನಿ ಹಾಗೂ ಸಾಧಕ ಬಾಧಕಗಳಿಗೆ ಸರ್ಕಾರದಿಂದ ಕೊಡಲಾಗಿರುವ ಪ್ರತಿಯೊಂದು ಸಹಾಯ ನೇರವಾಗಿ ಸಂತ್ರಸ್ತರಿಗೆ ತಲುಪಬೇಕು. ಬಾದಾಮಿ ತಾಲೂಕಿನಲ್ಲಿ ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯಲಿದೆ ಎಂಬ ಸೂಚನೆ ಮೇರೆಗೆ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಮೊದಲೇ ವಿಷಯದ ಗಂಭೀರತೆಯನ್ನು ಅರಿತಿದ್ದರಿಂದ ಯಾವುದೇ ಜನ ಜಾನುವಾರು ಪ್ರಾಣ ಹಾನಿಯಾಗಿಲ್ಲ ಎಂದರು.
ಅಪಾಯದ ಮುನ್ಸೂಚನೆ ಅರಿತು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು. ತಾಲೂಕಿನ ಶಿರಬಡಿಗಿ ಮತ್ತು ಐತಿಹಾಸಿಕ ಪಟ್ಟದಕಲ್ಲು ಗ್ರಾಮಗಳು ಅತೀ ಹೆಚ್ಚು ಪ್ರವಾಹಕ್ಕೆ ಒಳಗಾಗಿದ್ದರಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿ ತತ್‍ಕ್ಷಣ ಸ್ಪಂದಿಸಿದ್ದರಿಂದ ನೀರಿನಲ್ಲಿ ಸಿಲುಕಿದ ಜನರನ್ನು ರಕ್ಷಿಸಲಾಯಿತು ಎಂದರು.
ಈ ಹಿಂದೆ 2009ರಲ್ಲಿ ಪ್ರವಾಹಕ್ಕೆ ಒಳಗಾದಾಗ ಅನೇಕ ಹಳ್ಳಿಗಳು ಹಾಗೂ ಜಮೀನುಗಳು ಮುಳುಗಡೆ ಹೊಂದಿದ್ದವು. ಅದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಇಂತಹ ಪ್ರವಾಹಕ್ಕೆ ಒಳಗಾಗಿ ಮೇಲಿಂದ ಮೇಲೆ ಹಾನಿಗೊಳಗಾದ ಸಂತ್ರಸ್ತರನ್ನು ಪರಿಗಣಿಸಿ ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕು ಎಂದರು.
ಪ್ರವಾಹ ಇಳಿಮುಖವಾಗಿದ್ದರಿಂದ ಸಂತ್ರಸ್ತರು ತಮ್ಮ ಮನೆಗಳಿಗೆ ಮರಳುತಿದ್ದು, ಸದ್ಯ ಮನೆಗಳು ವಾಸಿಸಲು ಯೋಗ್ಯವಲ್ಲದ ಸ್ಥಿತಿಯಲ್ಲಿರುವುದರಿಂದ ಸಣ್ಣ-ಪುಟ್ಟ ಕಾರ್ಯಕ್ಕೆ ಕೂಡಲೇ ಹಣ ಬಿಡುಗಡೆಗೊಳಿಸಬೇಕು. ಸ್ಥಗಿತಗೊಂಡ ವಿದ್ಯುತ್ ಸಂಪರ್ಕ, ಕುಡಿಯುವ ನೀರು ಪೂರೈಸಲು ಕೂಡಲೇ ಕ್ರಮ ಕೈಗೊಳ್ಳಬೇಕು. ಹೆಸ್ಕಾಂ ಅಧಿಕಾರಿಗಳು ಜಮೀನಿನಲ್ಲಿ ಸುಟ್ಟುಹೋಗಿರುವ ಟ್ರಾನ್ಸ್ಫಾರ್ಮರ್ ಮರು ಅಳವಡಿಸಿ ಕೃಷಿಗೆ ಅನುಕೂಲ ಮಾಡಕೊಡಬೇಕು. ಅಲ್ಲದೇ ಪ್ರವಾಹಕ್ಕೆ ಒಳಗಾದ ಸ್ಥಳ, ಕೆಸರು ಹಾಗೂ ಕಲುಷಿತ ಪ್ರದೇಶವಾಗಿದ್ದರಿಂದ ದುರ್ವಾಸನೆ ಹಾಗೂ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿದ್ದು, ಆರೋಗ್ಯ ಇಲಾಖೆ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು ಎಂದರು.
ನೆರೆಹಾವಳಿ ಹಾಗೂ ಪ್ರವಾಹಕ್ಕೆ ಒಳಗಾದ ಜನ ಭಯಪಡುವ ಅವಶ್ಯಕತೆ ಇಲ್ಲ. ಮತಕ್ಷೇತ್ರದ ಪ್ರವಾಹಕ್ಕೊಳಗಾದ ಜನರ ಜೊತೆ ನಾನು ಸದಾ ಇರುತ್ತೇನೆ ಎಂದು ಹೇಳಿದರು.
ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ಭಾಯಕ್ಕ ಮೇಟಿ, ವಿಧಾನ ಪರಿಷತ್ ಸದಸ್ಯರಾದ ಎಸ್.ಆರ್.ಪಾಟೀಲ, ಆರ್.ಬಿ.ತಿಮ್ಮಾಪುರ, ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.