ಬಾಗಲಕೋಟೆ: ಮಲಪ್ರಭಾ, ಘಟಪ್ರಭಾ ನದಿಗಳ ಅಬ್ಬರ ಕಡಿಮೆ ಆಗುತ್ತಿದ್ದರೂ ಪ್ರವಾಹ ಪೀಡಿತ ಪ್ರದೇಶದಲ್ಲಿನ ಜನತೆ ಮಾತ್ರ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮುಧೋಳ ತಾಲೂಕಿನ ಬಿ.ಕೆ. ಬುದ್ನಿ ಗ್ರಾಮದಲ್ಲಿ ಬೆಳೆಗಳು ಜಲಾವೃತವಾಗಿವೆ. ಬೆಳೆ ರಕ್ಷಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ರೈತರ ಕೈಸೇರಬೇಕಿದ್ದ ಬೆಳೆಗಳು ನೀರುಪಾಲಾಗಿವೆ. ಉದ್ದಿನ ಬೆಳೆ, ಜೋಳ, ಮೆಕ್ಕೆಜೋಳ, ಕಬ್ಬು ಬೆಳೆಗಳು ಜಲಾವೃತಗೊಂಡಿದ್ದು, ರೈತರು ಕಂಗಾಲಾಗಿದ್ದಾರೆ.
ಪ್ರವಾಹ ಶಾಪಕ್ಕೆ ತತ್ತರಿಸಿ ಹೋಗಿವೆ ಮಲಪ್ರಭಾ, ಘಟಪ್ರಭಾ ನದಿ ತೀರದ ಗ್ರಾಮಗಳು ಕಳೆದ ವರ್ಷವೂ ಭೀಕರ ಪ್ರವಾಹಕ್ಕೆ ಸಿಲುಕಿ ಸಾಕಷ್ಟು ಆಸ್ತಿ, ಪಾಸ್ತಿ ಕಳೆದುಕೊಂಡಿದ್ದ ಬಿ. ಕೆ. ಬುದ್ನಿ ಗ್ರಾಮಸ್ಥರಿಗೆ ಪ್ರತಿ ವರ್ಷ ಪ್ರವಾಹ ಶಾಪದಂತಾಗಿದೆ. ಹೀಗಾಗಿ ಶಾಶ್ವತ ಪರಿಹಾರಕ್ಕಾಗಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಕ್ಷೇತ್ರದಲ್ಲಿಯೇ ಪ್ರತಿ ವರ್ಷ ಘಟಪ್ರಭಾ ಪ್ರವಾಹದ ಅಬ್ಬರ ಇದ್ದು, ಶಾಶ್ವತ ಪರಿಹಾರಕ್ಕೆ ಸಂತ್ರಸ್ತರು ಆಗ್ರಹಿಸಿದ್ದಾರೆ. ಗೌರಿ-ಗಣೇಶ ಹಬ್ಬ ಇದ್ದರೂ ಪ್ರವಾಹದಿಂದ ಹಬ್ಬದ ಸಂಭ್ರಮ ಮರೆಯಾಗಿದೆ. ಮನೆಗಳಿಗೂ ನೀರು ನುಗ್ಗಿದ್ದು, ಹಿನ್ನೆಲೆ ಹಬ್ಬ ಹರಿದಿನ ಆಚರಿಸಲಾಗುತ್ತಿಲ್ಲ ಎಂದು ಸಂತ್ರಸ್ತರು ತಮ್ಮ ಅಳಲು ತೋಡಿಕೊಂಡಿದ್ದಾರೆ.