ಬಾಗಲಕೋಟೆ : ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಆಕ್ಸಿಜನ್ ಕೊರತೆ ಎದುರಗಿದ್ದು ಪರಿಣಾಮ ಕೊರೊನಾ ರೋಗಿಗಳು ಪರದಾಡುವಂತಾಗಿದೆ. ಇದರಿಂದ ರೋಗಿಗಳ ಪರಿಸ್ಥಿತಿ ಬಗ್ಗೆ ಸಂಬಂಧಿಕರು ತೀವ್ರ ಆತಂಕ ವ್ಯಕ್ತಪಡಿಸಿದ್ದು ಆಸ್ಪತ್ರೆ ಸಿಬ್ಬಂದಿ ಹೇಳಿದಷ್ಟು ಹಣ ನೀಡುತ್ತಿದ್ದರೂ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ; ರೋಗಿಗಳ ಪರದಾಟ
ಬಾಗಲಕೋಟೆ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಆಕ್ಸಿಜನ್ ಸಿಲಿಂಡರ್ಗಳ ಕೊರತೆ ಎದುರಾಗಿದೆ. ಇದರಿಂದ ಅಲ್ಲಿದ್ದ ಹಲವು ಕೋವಿಡ್ ಸೋಂಕಿತರನ್ನು ಬೇರೆ ಕಡೆಗೆ ಶಿಫ್ಟ್ ಮಾಡುವಂತೆ ಆಸ್ಪತ್ರೆಯ ವೈದ್ಯರು ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಕಳೆದ ಎರಡು ದಿನಗಳಿಂದ ಜಿಲ್ಲೆಗೆ ಆಕ್ಸಿಜನ್ ಪೂರೈಕೆ ಆಗುತ್ತಿಲ್ಲ. ನೂರಾರು ಕೋವಿಡ್ ರೋಗಿಗಳು ಆಕ್ಸಿಜನ್ ಕೊರತೆಯಿಂದ ಬಳಲುತ್ತಿದ್ದಾರೆ. ಸದ್ಯ ಜಿಲ್ಲೆಗೆ ಪ್ರತಿದಿನ 6 ಟನ್ ಆಕ್ಸಿಜನ್ ಅಗತ್ಯ ಇದೆ. ಆದರೆ, ಬಳ್ಳಾರಿಯಿಂದ ಬರುತ್ತಿದ್ದ ಲಿಕ್ವಿಡ್ ಸಹ ಪೂರೈಕೆ ಆಗುತ್ತಿಲ್ಲ. ಇದರಿಂದ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಂಪೂರ್ಣ ಖಾಲಿಯಾಗಿದೆ. ರೋಗಿಗಳನ್ನು ಬೇರೆ ಕಡೆಗೆ ಕರೆದುಕೊಂಡು ಹೋಗಲು ಸಂಬಂಧಿಕರಿಗೆ ಇಲ್ಲಿನ ಖಾಸಗಿ ಆಸ್ಪತ್ರೆ ವೈದ್ಯರು ಸಲಹೆ ನೀಡುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಇನ್ನು ಇದರಿಂದ ದಿಕ್ಕುತೋಚದೇ ಆಸ್ಪತ್ರೆ ಬಳಿ ಜಮಾವಣೆ ಆಗಿರುವ ರೋಗಿಯ ಸಂಬಂಧಿಕರು ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಆಕ್ಸಿಜನ್ ಕೊರತೆಯಿಂದ ರೋಗಿಗಳಿಗೆ ಏನಾದರೂ ಆದ್ರೆ ಯಾರು ಹೊಣೆ? ಅಂತ ರೋಗಿಗಳ ಸಂಬಂಧಿಕರು ಆತಂಕ ವ್ಯಕ್ತಪಡಿಸಿದ್ದಾರೆ.