ಬಾಗಲಕೋಟೆ: ಜಮಖಂಡಿ ತಾಲೂಕಿನ ಜಂಬಗಿ ಸೇತುವೆಯ ರಸ್ತೆ ಪಕ್ಕದಲ್ಲಿ ವೀರ ಸಾವರ್ಕರ್ ಪ್ರತಿಷ್ಠಾನದ ಯುವಕರು, ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್.ನ್ಯಾಮಗೌಡ ಅವರ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ನಾಮಫಲಕ ಅಳವಡಿಸುವುದರ ಮೂಲಕ ಜಂಬಗಿ ಸೇತುವೆಗೆ ವೀರ ಸಾವರ್ಕರ್ ಸೇತುವೆ ಎಂದು ನಾಮಕರಣ ಮಾಡಿದರು.
ಸೇತುವೆಯ ರಸ್ತೆ ಪಕ್ಕದಲ್ಲಿ ವೀರ ಸಾವರ್ಕರ್ ಅವರ ಭಾವ ಚಿತ್ರವಿರುವ ನಾಮ ಫಲಕ ಅಳವಡಿಸಿ ಪೂಜೆ ಸಲ್ಲಿಸಿ ಸೇತುವೆಗೆ ವೀರ ಸಾವರ್ಕರ್ ಸೇತುವೆ ಎಂದು ನಾಮಕರಣ ಮಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್.ನ್ಯಾಮಗೌಡ ಮಾತನಾಡಿ, ಬ್ರಿಟಿಷರ ವಿರುದ್ಧ ವೀರ ಸಾವರ್ಕರ್ ಅವರು ವಿದ್ಯಾರ್ಥಿ ದಿಶೆಯಿಂದಲೇ ಹೋರಾಟ ಮಾಡುತ್ತಾ ಬಂದಿದ್ದರು. ಈ ಮೂಲಕ ಅವರು ಯುವಕರಿಗೆ ಸ್ಪೂರ್ತಿಯಾಗಿದ್ದಾರೆ. ಸರ್ಕಾರ ಕೂಡಲೇ ಈ ಸೇತುವೆಗೆ ವೀರ ಸಾವರ್ಕರ್ ಸೇತುವೆ ಎಂದು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.