ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ವೇಳೆ ವಿಪ್ ಉಲ್ಲಂಘನೆ ಪ್ರಕರಣದಲ್ಲಿ ಸಿಲುಕಿ ಸದಸ್ಯರು ಅನರ್ಹತೆಗೆ ಒಳಗಾಗುವುದನ್ನು ತಪ್ಪಿಸುವ ಉದ್ದೇಶದಿಂದ ರೂಪಿಸಿರುವ 'ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ ಕಾಯ್ದೆ) 1987'ರ ಕಾಯ್ದೆಯಡಿ ಅನರ್ಹತೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸೂಕ್ತ ನಿಯಮ ರೂಪಿಸಲು ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ವಿಪ್ ಉಲ್ಲಂಘಿಸಿದ ಆರೋಪ ಸಂಬಂಧ ತಮ್ಮನ್ನು ಸದಸ್ಯರ ಸ್ಥಾನದಿಂದ ಅನರ್ಹತೆಗೊಳಿಸಿದ ಜಿಲ್ಲಾಧಿಕಾರಿಯ ಕ್ರಮ ಪ್ರಶ್ನಿಸಿ ಸವಿತಾ, ಚಾಂದಿನಿ ಮತ್ತು ಗೋದಾವರಿ ಎಂಬುವರು ಹೈಕೋರ್ಟ್ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಎಸ್. ಸಂಜಯ ಗೌಡ ಅವರ ಪೀಠ ಸರ್ಕಾರಕ್ಕೆ ಈ ಸೂಚನೆ ನೀಡಿದೆ. ಅಲ್ಲದೆ, ರಾಜ್ಯ ಸರ್ಕಾರವು ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ ಕಾಯ್ದೆ), 1987ರ ಕಾಯ್ದೆಯಡಿಯಲ್ಲಿ ಅನರ್ಹತೆ ಪ್ರಕ್ರಿಯೆಗೆ ನಿಯಮ ರೂಪಿಸುವವರೆಗೆ ರಾಜಕೀಯ ಪಕ್ಷದ ತೀರ್ಮಾನವನ್ನು (ವಿಪ್) ಚುನಾಯಿತ ಸದಸ್ಯರಿಗೆ ರವಾನಿಸಲು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ರಚಿಸಿದೆ.
ಸ್ಥಳೀಯ ಸಂಸ್ಥೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ವೇಳೆ ಯಾರಿಗೆ ಮತ ಹಾಕಬೇಕು ಎಂಬ ಬಗ್ಗೆ ರಾಜಕೀಯ ಪಕ್ಷ ವಿಪ್ (ತೀರ್ಮಾನ) ತೆಗೆದುಕೊಳ್ಳಬೇಕು. ಅದನ್ನು ಚುನಾಯಿತ ಸದಸ್ಯರ ಸಭೆ ನಡೆಸುವ ಸಕ್ಷಮ ಅಧಿಕಾರಿಗೆ ರವಾನಿಸಬೇಕು. ಪಕ್ಷವು ತನ್ನ ತೀರ್ಮಾನವನ್ನು ಸಕ್ಷಮ ಅಧಿಕಾರಿಗೆ ಐದು ದಿನಗಳ ಮುನ್ನ ತಲುಪಿಸಬೇಕು. ಪಕ್ಷದ ತೀರ್ಮಾನವನ್ನು ಸಭೆ ನಡೆಸುವ 5 ದಿನಗಳ ಮುನ್ನ ಸಕ್ಷಮ ಅಧಿಕಾರಿಯು ಸ್ಥಳೀಯ ಸಂಸ್ಥೆಯ ತನ್ನ ಸದಸ್ಯರಿಗೆ ಕಳುಹಿಸಬೇಕು. ವಿಪ್ ನೋಟಿಸ್ ಅನ್ನು ಆರ್‌ಪಿಎಡಿ, ಕೊರಿಯರ್ ಅಥವಾ ಇ-ಮೇಲ್ ಮೂಲಕ ಕಳುಹಿಸುವುದು ರಾಜಕೀಯ ಪಕ್ಷಗಳಿಗೆ ಬಿಟ್ಟಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪಕ್ಷದ ತೀರ್ಮಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳಲು ಅನುಮತಿ ಕೋರಲು ಸದಸ್ಯರಿಗೆ ಐದು ದಿನಗಳ ಕಾಲಾವಕಾಶ ನೀಡಬೇಕಾಗುತ್ತದೆ. ಆಗ ಸದಸ್ಯರು ಅನರ್ಹತೆಗೆ ಒಳಗಾಗುವ ಸನ್ನಿವೇಶವನ್ನು ತಪ್ಪುತ್ತದೆ. ಒಂದೊಮ್ಮೆ ಪಕ್ಷದ ತೀರ್ಮಾನವನ್ನು ಸಕ್ಷಮ ಅಧಿಕಾರಿಗೆ ತಲುಪಿಸದೆ ಹೋದರೆ, ಸದಸ್ಯರ ವಿರುದ್ಧ ಅನರ್ಹತೆ ಪ್ರಕ್ರಿಯೆ ಕೈಗೊಳ್ಳುವಂತಿಲ್ಲ. ಒಂದೊಮ್ಮೆ ತೀರ್ಮಾನ ಕುರಿತ ನೋಟಿಸ್ ಜಾರಿಗೊಳಿಸಿದರೆ, ಅದು ವಿಪ್ ಜಾರಿ ಮಾಡಿದಂತಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.