ಕೃಷ್ಣಾ ನದಿಯ ಮಹಿಷವಾಡಗಿ ಬ್ಯಾರೇಜ್ನ ಹಿನ್ನೀರಿನಲ್ಲಿ ಬಾಳಪ್ಪಜ್ಜನ ದೇವಸ್ಥಾನ ಪ್ರತ್ಯಕ್ಷ ಬಾಗಲಕೋಟೆ : ಜಿಲ್ಲೆಯಲ್ಲಿ ಈ ಬಾರಿ ಬರಗಾಲ ಬೀಸಿದ್ದು, ಕೃಷ್ಣಾ ಸೇರಿದಂತೆ ಪ್ರಮುಖ ನದಿಗಳು ಬತ್ತಿ ಹೋಗಿದೆ. ಇದೀಗ ಕೃಷ್ಣಾ ನದಿ ಬತ್ತಿದ ನಂತರ ದೇವಾಲಯ ಒಂದು ಗೋಚರವಾಗಿರುವುದು ಗಮನ ಸೆಳೆಯುವಂತಾಗಿದೆ. ಇದೇನು ಮೊದಲ ಬಾರಿ ಏನೆಲ್ಲ.. ಕೃಷ್ಣಾ ಬರಿದಾಗ ಪ್ರತಿಸಲ ಎದ್ದು ಕಾಣುತ್ತಿದ್ದ ಪ್ರಶ್ನೆ ಈ ನಡು ಹೊಳೆಯಲ್ಲಿ ಯಾರಪ್ಪ ಈ ದೇವಸ್ಥಾನ ಕಟ್ಟಿದವರೂ ಎಂದು...
ಅಲ್ಲಿನ ಜನರು ಚಿಕ್ಕವರಿರಿವಾಗಿನಿಂದಲೂ ಈ ಗುಡಿಯನ್ನು ನೋಡುತ್ತಾ ಬಂದಿದ್ದು, ಅದು ಬಾಳಪ್ಪಜ್ಜನ ಗುಡಿ ಎಂದೇ ಖ್ಯಾತಿಯಾಗಿತ್ತೇ ಹೊರತು. ಅದನ್ನು ಯಾರು, ಯಾಕೆ, ಯಾವಾಗ ನದಿಯ ನಡುವೆ ಯಾಕೆ ಕಟ್ಟಿಸಿದರೂ ಎಂಬ ನೂರೆಂಟು ಪ್ರಶ್ನೆಗಳು ಅಲ್ಲಿನ ಜನರನ್ನು ಕಾಡುತ್ತಿತ್ತು. ಹೀಗಿದ್ದರೂ ಇಂದಿನ ಯುವ ಪೀಳಿಗೆಗೆ ಉತ್ತರ ಮಾತ್ರ ಸಿಕ್ಕಿರಲಿಲ್ಲ. ಅದು ಬಾಳಪ್ಪಜ್ಜನ ಗುಡಿ ಎಂದಷ್ಟೇ ಪರಿಚಿತವಾಗಿತ್ತು.
ಈ ಬಾರಿ ಕೃಷ್ಣಾ ನದಿ ಖಾಲಿಯಾಗಿದ್ದರಿಂದ ಮಹಿಷವಾಡಗಿ ಬ್ಯಾರೇಜ್ನ ಹಿಂಭಾಗದಲ್ಲಿ ಕಟ್ಟಿರುವ ಈ ಗುಡಿ ಪೂರ್ತಿಯಾಗಿ ಕಾಣತೊಡಗಿದೆ. ಈ ದೇವಸ್ಥಾನ ಅಪರೂಪ ಎನ್ನುವಂತೆ ವರ್ಷದಲ್ಲಿ ಒಂದು ಬಾರಿ ಇಲ್ಲವೇ, 2-3 ವರ್ಷಕ್ಕೆ ಒಮ್ಮೆ ಹೀಗೆ ಬರಗಾಲ ಬಂದಾಗ ಮಾತ್ರ ಇದು ಗೋಚರಿಸುತ್ತದೆ. ಅಂದು ಕೆಲವೇ ದಿನಗಳು ವಿಶೇಷ ಪೂಜೆಗೊಳ್ಳುವ ದೇವಸ್ಥಾನ ಇದಾಗಿದೆ. ಈ ಗುಡಿಯನ್ನು ಪೂರ್ವಕ್ಕೆ ಮುಖ ಮಾಡಿ ಕಟ್ಟಲಾಗಿದೆ. ಗರ್ಭಗುಡಿಯಲ್ಲಿ ಲಿಂಗವಿದೆ. ವಿಶಾಲವಾದ ಪಡಶಾಲೆ ಇದೆ. ಮೂರು ಕಮಾನುಗಳ ಪ್ರವೇಶ ದ್ವಾರವಿದೆ. ನದಿಯ ಕಡೆ ಒಂದು ಬಾಗಿಲಿದ್ದು, ಅದಕ್ಕೆ ಎದುರುಗಡೆ ಮತ್ತೊಂದು ಬಾಗಿಲು, ಬೃಹತ್ ಆಕಾರದ ಕರಿ ಕಲ್ಲಿನಿಂದ ಕಟ್ಟಡವನ್ನು ನಿರ್ಮಿಸಲಾಗಿದೆ. ಮತ್ತೊಂದು ವಿಶೇಷವೆನೆಂದರೆ ಯಾವುದೇ ವಾಸ್ತುಶಿಲ್ಪದ ಕೆತ್ತನೆಯ ಕೆಲಸವಾಗಲಿ ಈ ಗುಡಿಗೆ ನಡೆದಿಲ್ಲ. ಅದರೂ ಗುಡಿ ನೋಡುಗರನ್ನು ಆರ್ಕಸುವಂತಿದೆ.
ಈ ದೇವಾಲಯದ ಕುರಿತು ಮಾಹಿತಿ ಕಲೆ ಹಾಕುವಾಗ ರಬಕವಿಯ ಮರೆಗುದ್ದಿ ಮನೆತನದ ಹಿರಿಯ ಅಜ್ಜ ಬಾಳಪ್ಪ ಮರೆಗುದ್ದಿ ಕಟ್ಟಿಸಿದ್ದು ಎಂದು ತಿಳಿದು ಬಂದಿದೆ. ಈಗಲೂ ಆ ದೇವಸ್ಥಾನಕ್ಕೆ ಬಾಳಪ್ಪನ ಗುಡಿ ಎಂದು ಕರೆಯುತ್ತಾರೆ. ಆದರೆ, ಲಿಂಗ ಇರುವ ದೇವಸ್ಥಾನ. ಮರೆಗುದ್ದಿ ಮನೆತನದವರು ಹೇಳುವ ಪ್ರಕಾರ, ನಮ್ಮ ಮುತ್ಯಾಗ ಗಂಡು ಸಂತಾನ ಇರಲಿಲ್ಲ. ಇಬ್ಬರು ಹೆಣ್ಣು ಮಕ್ಕಳು. ಅವರದು ಮದುವೆ ಆಗಿತ್ತು. ಬಾಳಪ್ಪ ಸಣ್ಣಪುಟ್ಟ ವ್ಯಾಪಾರ ಮಾಡುತ್ತಿದ್ದ. ಈ ವೇಳೆ ಚಿಲ್ಲರೆ ನಾಣ್ಯಗಳಿಂದ ಸಾಕಷ್ಟು ಹಣ ಕೂಡಿಸಿದ್ದ. ಆ ಹಣ ಏನು ಮಾಡುವುದು ಎಂಬ ವಿಚಾರ ಹಿರಿಯರನ್ನು ಕೇಳಿದಾಗ ಅವರು ಕೃಷ್ಣಾ ನದಿಯ ದಡದಲ್ಲಿ ಒಂದು ಗುಡಿ ಕಟ್ಟಿಸಿದರೆ ಹೋಗಿ ಬರುವ ಜನಕ್ಕೆ ಪೂಜೆ ಮಾಡಲಿಕ್ಕೆ ಒಂದು ಜಾಗ ಆಗುತ್ತದೆ. ಇದರಿಂದ ಬಹಳ ಜನಕ್ಕ ಅನುಕೂಲ ಆಗುತ್ತದೆ ಎಂದು ಸಲಹೆ ಕೊಟ್ಟಿದ್ದರು. ಈ ಸಲಹೆಯಂತೆ ಗುಡಿ ನಿರ್ಮಿಸಲಾಗಿದೆ.
ಬನಹಟ್ಟಿ ಜಮಖಂಡಿ ಸಂಸ್ಥಾನಕ್ಕೆ ಸೇರಿದ್ದವರೇ, ರಬಕವಿ ಸಾಂಗ್ಲಿ ಸಂಸ್ಥಾನಕ್ಕೆ ಸೇರಿತ್ತು. ಆಗಿನ ಸಾಂಗ್ಲಿ ಸಂಸ್ಥಾನದಿಂದ ದೇವಾಲಯ ಕಟ್ಟಲು ಪರವಾಣಿಗೆ ಪಡೆದು 1912ರ ಸುಮಾರಿಗೆ ಈ ದೇವಾಲಯವನ್ನು ನಿರ್ಮಿಸಲಾಯಿತು. ಧಾರ್ಮಿಕ ಕಾರ್ಯವಾಗಿದ್ದರಿಂದ ನಮ್ಮ ಮುತ್ಯಾ ಯಾವುದಕ್ಕೂ ನನ್ನ ಹೆಸರು ಬೇಡ ಅಂದರು. ಈ ದೇವಾಲಯ ಕಟ್ಟಿಸಿದರ ಬಗ್ಗೆ ಸಾಂಗ್ಲಿಯಲ್ಲಿ ಇರುವ ದಾಖಲೆಗಳು ಮೋಡಿ ಭಾಷೆಯೊಳಗೆ ನೋಡಲು ಸಿಗುತ್ತಾವೆ ಎನ್ನುತ್ತಾರೆ ಮರೆಗುದ್ದಿ ಮನೆತನದವರು.
ಮೊದಲು ನದಿಯ ವ್ಯಾಪ್ತಿ ಬಹಳ ಕಡಿಮೆ ಇದ್ದ ಕಾರಣ ದೇವಾಲಯ ನದಿಯ ದಡದಲ್ಲಿ ಇತ್ತು. ಆದರೆ 1971ರಲ್ಲಿ ವಿರೇಂದ್ರ ಪಾಟೀಲ ಸರ್ಕಾರ ರಬಕವಿ-ಬನಹಟ್ಟಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಕುಡಿಯುವ ನೀರಿನ ಸಲುವಾಗಿ ಬ್ಯಾರೇಜ್ ನಿರ್ಮಿಸಲು ಅನುಮತಿ ನೀಡಿದರು. 1972ರಲ್ಲಿ ದೇವರಾಜ ಅರಸು ಸರ್ಕಾರವಿದ್ದಾಗ ಪ್ರಥಮ ಬಾರಿಗೆ ನೀರನ್ನು ತಡೆ ಹಿಡಿಯಲಾಯಿತು. ಈ ಕಾರಣ ದೇವಾಲಯ ನೀರೊಳಗೆ ಮುಳುಗಿ ಹೋಯಿತು. ಈಗ ಅದೇ ನದಿಯ ಮಧ್ಯ ಭಾಗವಾಗಿದೆ. ಶತಮಾನ ಕಳೆದರೂ ಯಾವುದೇ ನೀರಿಗೂ ಗರ್ಭಗುಡಿಯಲ್ಲಿರುವ ಮೂರ್ತಿಗಳು ಜಗ್ಗದೇ ಆಲುಗಾಡದೇ ಹಾಗೇ ನಿಂತಿರುವುದು ವಿಶೇಷವಾಗಿದೆ.
ಇದನ್ನೂ ಓದಿ :ಒಂದೆಡೆ ಉಚಿತ, ಇನ್ನೊಂದೆಡೆ ಏರಿಕೆಯಾದ ವಿದ್ಯುತ್ ದರ: ಬಾಗಲಕೋಟೆ ಮಹಿಳಾ ನೇಕಾರರ ಪರದಾಟ