ಬಾಗಲಕೋಟೆ: ಪಿಎಸ್ಐ ನೇಮಕಾತಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ನಾಲ್ಕೈದು ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಧಾರವಾಡದ ಕೋಚಿಂಗ್ ಸೆಂಟರ್‌ನ ಮಾಜಿ ನಿರ್ದೇಶಕನನ್ನು ಸಿಐಡಿ ಅಧಿಕಾರಿಗಳು ಯರಗಟ್ಟಿ ಯಲ್ಲಮ್ಮ ದೇವಸ್ಥಾನದಲ್ಲಿ ವಶಕ್ಕೆ ಪಡೆದರು. ಶ್ರೀಕಾಂತ ಚೌರಿ ಪೊಲೀಸರು ವಶಕ್ಕೆ ಪಡೆದ ಆರೋಪಿ. ಈತ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದ ನಿವಾಸಿ. ಪಿಎಸ್‍ಐ ಅಭ್ಯರ್ಥಿಗಳಿಂದ ಲಕ್ಷಾಂತರ ಹಣ ಪಡೆದು ಡೀಲ್ ಕುದುರಿಸಿರುವ ಗುರುತರ ಆರೋಪ ಈತನ ಮೇಲಿದೆ.
ಇದನ್ನೂ ಓದಿ:PSI ನೇಮಕಾತಿ ಅಕ್ರಮ: ಆರೋಪಿಯೊಬ್ಬನ ಮನೆಯಲ್ಲಿ 20ಲಕ್ಷ ನಗದು ಪತ್ತೆ!
ಮೇ 14ರಂದು ಜಮಖಂಡಿ ನಗರದಲ್ಲಿ ಶ್ರೀಕಾಂತ್ ಚೌರಿ ಮದುವೆಯಾಗಿದೆ. ಈ ಕಾರ್ಯಕ್ರಮದಲ್ಲಿ ರಾಜಕೀಯ ಮುಖಂಡರು ಭಾಗಿಯಾಗಿದ್ದರು ಎನ್ನಲಾಗಿದೆ. ಮದುವೆಯ ಬಳಿಕ ರಬಕವಿ, ಬನಹಟ್ಟಿ ತಾಲೂಕಿನ ಯರಗಟ್ಟಿ ಯಲ್ಲಮ್ಮ ದೇವಸ್ಥಾನಕ್ಕೆ ಕುಟುಂಬಸಹಿತ ಆರೋಪಿ ದರ್ಶನಕ್ಕೆ ತೆರಳಿದ್ದ. ಈ ಮಾಹಿತಿ ಪಡೆದ ಸಿಐಡಿ ಅಧಿಕಾರಿಗಳು ಶ್ರೀಕಾಂತ್ ಚೌರಿಯನ್ನು ದೇವಸ್ಥಾನದಲ್ಲೇ ವಶಕ್ಕೆ ಪಡೆದರು.
ಶ್ರೀಕಾಂತ್ ಚೌರಿ ನಡೆಸುತ್ತಿದ್ದ ಕೋಚಿಂಗ್ ಸೆಂಟರ್ ವಿರುದ್ಧ ಬೆಂಗಳೂರು ಪೊಲೀಸರಿಗೆ ಪತ್ರದ ಮುಖೇನ ದೂರು ಬಂದಿದ್ದು, ಕಳೆದ ಕೆಲ ದಿನಗಳಿಂದ ಸಿಐಡಿ ಪೋಲಿಸರು ಜಮಖಂಡಿಯಲ್ಲೇ ಬೀಡುಬಿಟ್ಟಿದ್ದರು. ಆರೋಪಿಯನ್ನು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಾಥಮಿಕ ವಿಚಾರಣೆ ನಡೆಸಿದ ಬಳಿಕ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗ್ತಿದೆ.