ಬಾಗಲಕೋಟೆ: "ಕಾಂಗ್ರೆಸ್ನಲ್ಲಿ ಹೊರಗಿನಿಂದ ಬಂದವರು ಮತ್ತು ಮೂಲ ಕಾಂಗ್ರೆಸ್ಸಿಗರು ಎಂಬ ಎರಡು ಗುಂಪುಗಳಿವೆ. ಮೂಲ ನಿವಾಸಿಗಳು ಮತ್ತು ಅನಿವಾಸಿಗಳ ನಡುವಿನ ಹೋರಾಟದ ಮಧ್ಯೆ ಸಿಎಂ ಸಿದ್ದರಾಮಯ್ಯ ಅವರು ಸಿಲುಕಿಕೊಂಡಿದ್ದಾರೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಬೀಳಗಿ ತಾಲೂಕಿನ ಕೋರ್ತಿ ಗ್ರಾಮದಲ್ಲಿ ಬರ ವೀಕ್ಷಣೆಗೆ ಆಗಮಿಸಿದ್ದಾಗ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಸಿದ್ದರಾಮಯ್ಯ ನಾನೇ ಐದು ವರ್ಷ ಸಿಎಂ ಆಗಿರುತ್ತೇನೆ ಎಂದು ಹೇಳಿಕೆ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಭಯ ಇದ್ದವರು ಈ ರೀತಿಯ ಹೇಳಿಕೆ ಕೊಡುತ್ತಾರೆ. ಭಯ ಇಲ್ಲ ಎಂದರೆ ಯಾಕೆ ಈ ರೀತಿಯ ಹೇಳಿಕೆ ಕೊಡಬೇಕು. ಇವರು ಯಾಕೆ ಮೇಲಿಂದ ಮೇಲೆ ನಾನೇ ಸಿಎಂ, ನಾನೇ ಸಿಎಂ ಎಂದು ಹೇಳುತ್ತಿದ್ದಾರೆ" ಎಂದು ಪ್ರಶ್ನಿಸಿದರು.
"ಅವರಿಗೆ ಅತಂತ್ರ ಸ್ಥಿತಿ ನಿರ್ಮಾಣ ಆಗಿದೆ. ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಅವರು ಹೊರಗಿನವರಾಗಿದ್ದಾರೆ. ಈ ಭಾವನೆಯಿಂದ ಆತಂಕಕ್ಕೂಳಗಾಗಿದ್ದಾರೆ. ಈ ಆತಂಕದಿಂದ ಈ ರೀತಿ ಹೇಳುತ್ತಿದ್ದಾರೆ" ಎಂದರು. "ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ತಂಡಗಳಾಗಿವೆ. ಡಿ ಕೆ ಶಿವಕುಮಾರ್ ಅವರ ತಂಡ, ಸತೀಶ್ ಜಾರಕಿಹೊಳಿ ಅವರ ತಂಡ, ಸಿದ್ದರಾಮಯ್ಯ ಅವರು ತಂಡ, ಪರಮೇಶ್ವರ್ ಅವರ ತಂಡ, ಪ್ರಿಯಾಂಕ್ ಖರ್ಗೆಯವರ ತಂಡ ಇದೆ. ತಮ್ಮ ಶಕ್ತಿ ಪ್ರದರ್ಶನ ತೋರಿಸಲು ಅವರಲ್ಲಿಯೇ ಆಪರೇಷನ್ ಹಸ್ತ ನಡೆಯುತ್ತಿದೆ" ಎಂದ ಅವರು, ಇದರ ಲಾಭ ಪಡೆದುಕೊಳ್ಳಲು ಬಿಜೆಪಿ ಸಿದ್ಧವಾಗಿದೆಯೇ ಎಂದು ಕೇಳಿದಾಗ, "ಮೊದಲು ಸರ್ಕಾರ ಬಿದ್ದು ಹೋಗಲಿ ಆಮೇಲೆ ನೋಡೋಣ" ಎಂದು ಉತ್ತರಿಸಿದರು.