ಕರ್ನಾಟಕ

karnataka

ETV Bharat / state

ತೋಟಗಾರಿಕೆ ವಿವಿ 12ನೇ ಘಟಿಕೋತ್ಸವ:16 ಚಿನ್ನ ಮುಡಿಗೇರಿಸಿಕೊಂಡ ಗ್ರಾಮೀಣ ಪ್ರತಿಭೆ

ಬಾಗಲಕೋಟೆ ತೋಟಗಾರಿಕೆ ವಿವಿಯಲ್ಲಿ 12ನೇ ಘಟಿಕೋತ್ಸವ: ಮುನಿರಾಬಾದ್ ತೋಟಗಾರಿಕೆ ವಿಶ್ವವಿದ್ಯಾಲಯದ ಬಿಎಸ್‍ಸಿ (ಹಾನರ್ಸ್) ಪದವಿಯ ವಿವಿಧ ವಿಷಯಗಳಲ್ಲಿ 16 ಚಿನ್ನದ ಪದಕಗಳನ್ನು ಗಳಿಸಿದ ಧರಣಿ ಶೆಟ್ಟಿ ಕೋಲಾರ ಜಿಲ್ಲೆಯ ಸಗಟೂರು ಗ್ರಾಮ ಗ್ರಾಮೀಣ ಪ್ರತಿಭೆ. ರಾಜ್ಯಪಾಲರು ಹಾಗೂ ತೋಟಗಾರಿಕೆ ವಿವಿ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಚಿನ್ನದ ಪದಕ ಸ್ವೀಕರಿಸಿದರು.

Bagalkot Horticulture University 12th Convocation
ತೋಟಗಾರಿಕೆ ವಿವಿ 12ನೇ ಘಟಿಕೋತ್ಸವ,16 ಚಿನ್ನದ ಪದಕ ಪಡೆದ ಧರಣಿ..

By

Published : Jul 1, 2023, 8:02 PM IST

Updated : Jul 1, 2023, 10:34 PM IST

ತೋಟಗಾರಿಕೆ ವಿವಿ 12ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿದರು.

ಬಾಗಲಕೋಟೆ: ತೋಟಗಾರಿಕೆ ವಿವಿಯಲ್ಲಿ ಶನಿವಾರ ನಡೆದ 12ನೇ ಘಟಿಕೋತ್ಸವದಲ್ಲಿ ಕಿರಾಣಿ ವ್ಯಾಪಾರಸ್ಥನ ಮಗಳು ಧರಣಿಗೆ 16 ಚಿನ್ನದ ಪದಕಗಳು ಲಭಿಸಿವೆ. ರಾಜ್ಯದ ರಾಜ್ಯಪಾಲರು ಹಾಗೂ ತೋಟಗಾರಿಕಾ ವಿವಿಯ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಚಿನ್ನದ ಪದಕ ಸ್ವೀಕರಿಸಿದರು.

ಕೋಲಾರ ಜಿಲ್ಲೆಯ ಸುಗಟೂರ ಗ್ರಾಮದ ಧರಣಿ ಶೆಟ್ಟಿ ಅವರು, ಕಿರಾಣಿ ವ್ಯಾಪಾರಸ್ಥ ನಾಗೇಂದ್ರ ಮತ್ತು ಸವಿತಾ ದಂಪತಿಯ ಮೊದಲ ಮಗಳು. ಕೋಲಾರದ ಚಿನ್ಮಯ ವಿದ್ಯಾಲಯದಲ್ಲಿ 10ನೇ ತರಗತಿಯ ವರೆಗೆ, ಸಹ್ಯಾದ್ರಿ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡಿರುವರು. ಮುನಿರಾಬಾದ್ ತೋಟಗಾರಿಕೆ ವಿಶ್ವವಿದ್ಯಾಲಯದ ಬಿಎಸ್‍ಸಿ (ಹಾನರ್ಸ್) ಪದವಿಯಲ್ಲಿ ವಿವಿಧ ವಿಷಯಗಳಲ್ಲಿ ಒಟ್ಟು 16 ಚಿನ್ನದ ಪದಕಗಳನ್ನು ಧರಣಿ ಗಳಿಸಿದ್ದಾರೆ.

ಬಾಗಲಕೋಟೆ ತೋಟಗಾರಿಕೆ ವಿವಿಯಲ್ಲಿ 2019ರಲ್ಲಿ ನಡೆದ ಅಂತರ್ ವಿದ್ಯಾಲಯಗಳ ಪ್ರಬಂಧ ಸ್ಪರ್ಧೆ, 2021 ರಲ್ಲಿ ಮೈಸೂರಿನಲ್ಲಿ ನಡೆದ ಅಂತರ್ ವಿದ್ಯಾಲಯಗಳ ಯುವ ಪ್ರತಿಭೋತ್ಸವದಲ್ಲಿ ಕೊಲಾಜ್ಮೇಕಿಂಗ್‍ನಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಚಿತ್ರಕಲೆ, ಕೋಲಾಜ್, ಅಡುಗೆಯಲ್ಲಿ ಹೊಸ ಪ್ರಯೋಗ ಮಾಡುವ ಹವ್ಯಾಸ ರೂಢಿಸಿಕೊಂಡಿದ್ದು,ಸದ್ಯ ಪದವಿಯಲ್ಲಿ 16 ಚಿನ್ನದ ಪದಕಗಳನ್ನು ಗಳಿಸಿ ಸಾಧನೆ ಮಾಡಿದ್ದಾರೆ. ಮುಂದೆ ಯುಪಿಎಸ್‍ಸಿ ನಾಗರಿಕಾ ಸೇವಾ ಪರೀಕ್ಷೆ ಬರೆಯುವ ಬಗ್ಗೆ ಹೆಚ್ಚಿನ ಒಲವು ಇದೆ ಎಂದು ಈಟಿವಿ ಭಾರತ್​ದೊಂದಿಗೆ ಧರಣಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿಗಳು...ಬಿಎಸ್ಸಿ (ಹಾನರ್ಸ್) ಪದವಿಯಲ್ಲಿ ನಿಶ್ಚಿತ ಎನ್ 4 ಬಂಗಾರದ ಪದಕ ಪಡೆದರೆ, ಸಚೀತನ ಮೋಡಗಿ, ಸರಸ್ವತಿ ಆರ್, ಪ್ರಿಯಾಂಕಾ ಎಚ್.ಎಲ್ ತಲಾ 3 ಬಂಗಾರದ ಪದಕ ಗಳಿಸಿದ್ದಾರೆ. ಎಸ್.ಪಿ.ಶೃತಿ, ಕುನೆ ಲಾವಣ್ಯ, ಎಚ್.ಎಸ್.ಹೇಮಂತ ಗೌಡ, ಭುವನೇಶ್ವರಿ ಖಡಕಿ ತಲಾ 2 ಬಂಗಾರದ ಪದಕ ಪಡೆದಿದ್ದಾರೆ.

ಕಾವ್ಯಶ್ರೀ ಡಿ.ಸಿ, ವರ್ಷ ಮೋಜಿ, ದಿವ್ಯಭಾರತಿ, ಸುಷ್ಮಾ ಎನ್, ಶೀತಲ್ ಬಿ.ಆರ್, ಮಂಜುನಾಥ ಮೆಂದೋಳೆ, ಲಾವಣ್ಯ ವಾಯ್.ಎಸ್, ಅಮಲ್ ಕಿಸೋರ ತಲಾ ಒಂದು ಬಂಗಾರದ ಪದಕ ಸ್ವೀಕರಿಸಿದ್ದಾರೆ.

ಪಿಎಚ್.ಡಿ ಪದವಿಯಲ್ಲಿ ಜಮುನಾರಾಣಿ ಜಿ.ಎನ್ ಪ್ರಥಮ ರ‍್ಯಾಂಕ್​ನೊಂದಿಗೆ 2 ಚಿನ್ನದ ಪದಕ ಪಡೆದರು. ದ್ವಿತೀಯ ರ‍್ಯಾಂಕ್​ನೊಂದಿಗೆ ರುಚಿತಾ ಟಿ 3 ಬಂಗಾರದ ಪದಕ ಸ್ವೀಕರಿಸಿದರು. ಎಂ.ಎಸ್.ಸಿ (ತೋಟಗಾರಿಕೆಯಲ್ಲಿ) ಅನುಷ್ಕಾ 6 ಚಿನ್ನದ ಪದಕ ಪಡೆದುಕೊಂಡರೆ, ಅಜಿತ್ ಕುಮಾರ 3 ಚಿನ್ನದ ಪದಕ, ಸ್ನೇಹಾ ಹೆಂಬಾಡೆ, ವಿದ್ಯಾ ತಲಾ ಎರಡು ಚಿನ್ನದ ಪದಕ, ಸಹನಾ ಜಿ.ಎಸ್, ಧನುಜಾ ಜಿ.ಎಸ್, ದಿವಾಕರ ಸಿ.ಜಿ, ಶಾಂತಾ ತಲಾ ಒಂದು ಚಿನ್ನದ ಪದಕಗಳನ್ನು ಪಡೆದುಕೊಂಡರು.

ಕೃಷಿ ,ತೋಟಗಾರಿಕೆ ಕ್ಷೇತ್ರದಲ್ಲಿ ಸುಸ್ಥಿರ ಅಭಿವೃದ್ದಿಗೆ ಶ್ರಮಿಸಿ: ಥಾವರ್ ಚಂದ್ ಗೆಹ್ಲೋಟ್:ಯುವ ಪದವೀಧರರು ಹೊಸ ಆಲೋಚನೆ,ಸೇವಾ ಮನೋಭಾವನೆಯೊಂದಿಗೆ ರಾಜ್ಯ ಮತ್ತು ದೇಶದ ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಸುಸ್ಥಿರವಾದ ಅಭಿವೃದ್ದಿಯ ಕೊಡುಗೆ ನೀಡಬೇಕು ಎಂದು ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಬಾಗಲಕೋಟೆ ನಗರದ ತೋಟಗಾರಿಕೆ ವಿಶ್ವವಿದ್ಯಾಲಯದ ಆವರಣದಲ್ಲಿ ಬುಧವಾರ ನಡೆದ ತೋಟಗಾರಿಕೆ ವಿವಿಯ 12ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತೋಟಗಾರಿಕೆ ಸಮಾಜದ ಪೌಷ್ಟಿಕಾಂಶದ ಬೆನ್ನೆಲುಬು ಮಾತ್ರವಲ್ಲದೇ ರಾಜ್ಯದಲ್ಲಿ ಸುಸ್ಥಿರ ಜೀವನೋಪಾಯದ ಸಾಧನೆ ಆಗಿದೆ.

ಇದರಿಂದ ಗ್ರಾಮೀಣ ಪ್ರದೇಶದ ಆರ್ಥಿಕತೆಯು ಉದ್ಯಮ ಶೀಲತೆಯ ಅಗತ್ಯತೆಯನ್ನು ಗ್ರಾಮೀಣ ಯುವಕರು ಮತ್ತು ಮಹಿಳಾ ಸಬಲೀಕರಣವು ಉದ್ಯಮ ಶೀಲತೆ ಮೂಲಕ ಸ್ವಯಂ ಸಹಾಯಕರಾಗಿ ತಮ್ಮನ್ನು ತೊಡಗಿಸಿಕೊಳ್ಳಲು ಅವಕಾಶವಿದೆ. ಇದಕ್ಕೆ ಪೂರಕ ಎಂಬಂತೆ ಸಹಕಾರಿ ಸಂಸ್ಥೆಗಳು ರೈತ ಉತ್ಪಾದಕ ಕಂಪನಿಗಳು, ತೋಟಗಾರಿಕಾ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವುದು ಕೂಡ ಜೀವನೋಪಾಯ ಸುಧಾರಿಸಲು ಸಹಾಯ ಮಾಡುತ್ತಿವೆ ಎಂದು ತಿಳಿಸಿದರು.

ರಾಜ್ಯಾದ್ಯಂತ ಇರುವ 11 ಸಂಶೋದನಾ ಕೇಂದ್ರಗಳು ತೋಟಗಾರಿಕೆಯ ಸವಾಲುಗಳನ್ನು ಎದುರಿಸಲು ಅಗತ್ಯ ಸಂಶೋಧನೆಯನ್ನು ಕೈಗೊಳ್ಳುತ್ತಿವೆ. ವಿಶ್ವವಿದ್ಯಾಲಯ ರೈತರ ತಕ್ಷಣ ಸಮಸ್ಯೆಗಳನ್ನು ಪರಿಹರಿಸಲು ಮಾನವ ಸಂಪನ್ಮೂಲ ಬಳಸಿಕೊಳ್ಳಬೇಕು ಎಂದರು. ಭಾರತೀಯ ಕೃಷಿ ಅನುಸಂಧಾನ ಪರಿಷತ್‍ನ ಉಪ ಮಹಾನಿರ್ದೇಶಕ ಡಾ.ಉದಮ್ ಸಿಂಗ್ ಗೌತಮ್ ಮಾತನಾಡಿ, ಭಾರತ ಅಭಿವೃದ್ದಿ ರಾಷ್ಟ್ರವಾಗಿ ಪರಿವರ್ತಿಸುವಲ್ಲಿ ಕೃಷಿ ಮತ್ತು ಆಹಾರ ಸಂಸ್ಕರಣೆ ಮಹತ್ವದ ಪಾತ್ರ ವಹಿಸುತ್ತಿದೆ. ಕೃಷಿಯಲ್ಲಿ ಸಾಮಾನ್ಯ ಬುದ್ದಿವಂತಿಕೆ ಕೂಡ ಕೃಷಿಯನ್ನು ಹೆಚ್ಚು ಬಲಿಷ್ಟ ಮತ್ತು ಉತ್ಪಾದಕವಾಗಿಸಲು ಮಹತ್ವದ ಪಾತ್ರವಿದೆ.

ತೋಟಗಾರಿಕೆ ಕ್ರಾಂತಿಯು ಗ್ರಾಮ ಮತ್ತು ನಗರ ಪ್ರದೇಶದ ನಡುವೆ ಇರುವ ಅಂತರವನ್ನು ಕಡಿಮೆ ಮಾಡುತ್ತದೆ. ತೋಟಗಾರಿಕೆ ಶಿಕ್ಷಣದಲ್ಲಿ ಸುಧಾರಣೆ, ಉದ್ಯಮ ಕೌಶಲ್ಯ ಹೊಂದಿರುವ ಪದವೀಧರರನ್ನಾಗಿಸಿ ಉದ್ಯೋಗ ಹುಡುಕುವ ಬದಲು ಉದ್ಯೋಗ ಸೃಷ್ಟಿ ಕರ್ತನಾಗಿ ಮಾಡುತ್ತದೆ ಎಂದು ಅಭಿಪ್ರಾಯ ತಿಳಿಸಿದರು.

ನೋಬಲ್ ಪ್ರಶಸ್ತಿ ವಿಜೇತ ಡಾ.ನಾರ್ಮನ್ ಬೋರ್ಲಾಗ್ ಅವರ ಬಿಳಿ ಕ್ರಾಂತಿಯನ್ನು ತಂದ ಡಾ.ವರ್ಗೀಸ್ ಕುರಿಯನ್ ಮತ್ತು ಹಸಿವು ಬಡತನ ಅಪೌಷ್ಟಿಕತೆಯನ್ನು ಜಯಿಸಿದ ಡಾ.ಎಂ.ಎಸ್.ಸ್ವಾಮಿನಾಥನ್ ಅವರಂತಹ ವ್ಯಕ್ತಿಗಳ ಅನುಭವ ಹಾಗೂ ಕಾರ್ಯವನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದರು. ತೋಟಗಾರಿಕೆ, ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸೇರಿದಂತೆ ವ್ಯವಸ್ಥಾಪನಾ ಮಂಡಳಿ ಹಾಗೂ ಪ್ರಾಜ್ಞ ಪರಿಷತ್ತಿನ ಸದಸ್ಯರು ಉಪಸ್ಥಿತರಿದ್ದರು.

ಇದನ್ನೂಓದಿ:ಆಯುರ್ವೇದ ಆಸ್ಪತ್ರೆಯಲ್ಲಿ ಔಷಧ ಸಸ್ಯ ಉದ್ಯಾನ: ಈ ಮಾದರಿ ಆಸ್ಪತ್ರೆ ಮಾಹಿತಿ ಇಲ್ಲಿದೆ ನೋಡಿ..

Last Updated : Jul 1, 2023, 10:34 PM IST

ABOUT THE AUTHOR

...view details