ಬಾಗಲಕೋಟೆ: ಏಷ್ಯನ್ ಅಂಡರ್-17 ಚಾಂಪಿಯನ್‌ಶಿಪ್ ಕುಸ್ತಿಯಲ್ಲಿ ಜಿಲ್ಲೆಯ ಮುಧೋಳ ತಾಲೂಕಿನ ಕುಸ್ತಿಪಟು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದು, ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಜಿಲ್ಲೆಯ ಮುಧೋಳ ನಗರದ ನಿಂಗಪ್ಪ ಗೆನನ್ನವರ 45 ಕೆಜಿ ವಿಭಾಗದ ಕುಸ್ತಿಯಲ್ಲಿ ಜಯಶಾಲಿಯಾಗಿ ಹೊರಹೊಮ್ಮಿದ್ದಾರೆ.
ಕಿರ್ಗಿಸ್ತಾನ್ದಲ್ಲಿ ಗುರುವಾರ ನಡೆದ ಕುಸ್ತಿ ಚಾಂಪಿಯನ್ ಶಿಪ್ನಲ್ಲಿ ಗೆದ್ದ ಯುವ ಕುಸ್ತಿಪಟು ಬಾಗಲಕೋಟೆ ಜಿಲ್ಲೆಯು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವಂತೆ ಮಾಡಿದ್ದಾರೆ. 45 ಕೆಜಿ ಫ್ರೀಸ್ಟೈಲ್ ವಿಭಾಗದ ಫೈನಲ್‌ನಲ್ಲಿ ಇರಾನ್‌ನ ಅಮೀರ್‌ಮೊಹಮ್ಮದ್ ಸಲೇಹ್ ಅವರನ್ನು ಸೋಲಿಸಿದ ನಿಂಗಪ್ಪ, ಬಲವಾದ ರಕ್ಷಣಾತ್ಮಕ ಮತ್ತು ಶಕ್ತಿಯುತ ಲೆಗ್ ಅಟ್ಯಾಕ್ಗೆ ಹೆಸರಾಗಿದ್ದಾರೆ.
ಕುಸ್ತಿಯಲ್ಲಿ ಚಿನ್ನ ಗೆದ್ದಿರುವ ನಿಂಗಪ್ಪನವರ ಸಾಧನೆ ಇತರ ಕ್ರೀಡಾಪಟುಗಳಿಗೆ ಮಾದರಿಯಾಗಿದೆ. ನಿಂಗಪ್ಪನವರು ಬಡ ಕುಟುಂಬದಲ್ಲಿ ಹುಟ್ಟಿಬೆಳೆದಿದ್ದು, ಅವಿರತ ಶ್ರಮದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ. ಇವರ ತಂದೆ-ತಾಯಿ ನಿತ್ಯ ಜೀವನಕ್ಕಾಗಿ ಕೂಲಿ ಮಾಡುತ್ತಿದ್ದಾರೆ. ಕುಸ್ತಿಪಟುವಿನ ಚಿನ್ನದ ಸಾಧನೆಗೆ ಮುಧೋಳ ನಗರದಲ್ಲಿ ಕುಟುಂಬಸ್ಥರ ಹಿತೈಷಿಗಳು ಸಂಭ್ರಮ ವ್ಯಕ್ತಪಡಿಸಿದ್ದಾರೆ.