ಬಾಗಲಕೋಟೆ:ರೈತರೇ ವ್ಯವಸಾಯ ಮಾಡಲು ಪ್ರಯಾಸ ಪಡುತ್ತಿದ್ದರೆ, ಇಲ್ಲೊಬ್ಬರು ಬೆಂಗಳೂರಿನಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿದ್ದರೂ ತಮ್ಮನ್ನು ಕೃಷಿಯಲ್ಲಿ ತೊಡಗಿಸಿಕೊಂಡು ಮಾದರಿಯಾಗಿದ್ದಾರೆ.
ಹೌದು, ಜಿಲ್ಲೆಯ ಹುನಗುಂದ ಪಟ್ಟಣದ ಸಿದ್ದಪ್ಪ ಬಂಡಿ ಎಂಬುವರು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಜಮೀನಿನಲ್ಲಿ ಸಾವಯವ ಕೃಷಿ ಹಾಗೂ ಮಿಶ್ರ ಬೆಳೆ ಬೆಳೆದು ರೈತರಿಗೆ ಮಾದರಿಯಾಗಿದ್ದಾರೆ. ತಮ್ಮ 9 ಎಕೆರೆ ಜಮೀನಿನಲ್ಲಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿರುವ ಸಿದ್ದಪ್ಪ ಅವರು, ನಾಲ್ಕು ವಿಧದ ವ್ಯವಸಾಯ ಪದ್ಧತಿಯನ್ನು ಅನುಸರಿಸಿ, ಗಮನ ಸೆಳೆದಿದ್ದಾರೆ.
ತೋಟದಲ್ಲಿ ಕೆಲಸ ಮಾಡುತ್ತಿರುವ ಸಿದ್ದಪ್ಪ ಬಂಡಿ ಅರಣ್ಯ ಕೃಷಿ ಜೊತೆ ತೋಟಗಾರಿಕೆ ಬೆಳೆಗೂ ಒತ್ತು..
ಅರಣ್ಯ ಕೃಷಿಯನ್ನು ಮಾಡಿ 3113 ಮಹಾಗನಿ ಗಿಡಗಳನ್ನು ಬೆಳೆಸಿದ್ದಾರೆ. ತೋಟಗಾರಿಕೆ ಬೆಳೆಯಾಗಿ ಪೇರಳೆ, ಸೀತಾಫಲ, ರಾಮಫಲ, ನುಗ್ಗೇಕಾಯಿ ಹಾಗೂ ಕರಿಬೇವು ಬೆಳೆಸಿದ್ದಾರೆ. ಉತ್ತರ ಕರ್ನಾಟಕ ಬೆಳೆಗಳಾದ ಜೋಳ, ಕಡಲೆ, ತೊಗರಿಯನ್ನೂ ಬೆಳೆದಿದ್ದಾರೆ. ದೇಶಿ ಗೋವು ಬೆಳೆಸುವ ಗುರಿಯನ್ನೂ ಹೊಂದಿರುವ ಸಿದ್ದಪ್ಪ, ಅದಕ್ಕಾಗಿ ಮೇವು ಬೆಳೆಸುತ್ತಿದ್ದಾರೆ.
ತೋಟದಲ್ಲಿ ಕಾರ್ಯನಿರತ ಸಿದ್ದಪ್ಪ ಜಮೀನು ಒಂದು ಬೆಳೆ ಹಲವು
ಹೀಗೆ ಒಂದೇ ಜಮೀನಿನಲ್ಲಿ ನಾಲ್ಕು ಬಗೆಯ ಬೆಳೆ ಬೆಳೆಯುವ ಮೂಲಕ ಹೆಚ್ಚಿನ ಆದಾಯ ಪಡೆಯುವ ಗುರಿ ಇಟ್ಟುಕೊಂಡಿದ್ದಾರೆ ಈ ಪ್ರಗತಿಪರ ರೈತ. ಇಷ್ಟೆಲ್ಲಾ ಬೆಳೆಗಳಿಗೆ ಹೆಚ್ಚಿನ ನೀರು ಬೇಕಿರುವ ಕಾರಣ ಹನಿ ನೀರಾವರಿ ಯೋಜನೆಯನ್ನು ಅಳವಡಿಸಿಕೊಂಡಿರುವುದು ಅವರಿಗೆ ವರದಾನವಾಗಿದೆ.
ಲಾಕ್ಡೌನ್, ಸರ್ಕಾರದ ಯೋಜನೆಯ ಸದುಪಯೋಗ
ಕಳೆದ ವರ್ಷ ಲಾಕ್ಡೌನ್ ವೇಳೆ ಹುನಗುಂದ ಪಟ್ಟಣಕ್ಕೆ ಬಂದಾಗ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳದೆ ಜಮೀನಿನಲ್ಲಿ ಕೆಲಸ ಮಾಡುತ್ತಾ, ಏನಾದರೂ ಸಾಧಿಸಬೇಕೆಂದು ಯೋಚಿಸಿದಾಗ ಹೊಳೆದದ್ದೇ ಈ ಕೃಷಿ.
ಇದರಿಂದ ಪ್ರೇರಿತರಾಗಿ ತಮ್ಮ ಸಹೋದರನ ಜೊತೆಗೆ ಕೈಜೋಡಿಸಿ ತಮ್ಮ 9 ಎಕರೆ ಜಮೀನಿನಲ್ಲಿ ಮಿಶ್ರ ಬೆಳೆಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ. ಪ್ರತಿ ತಿಂಗಳು ರಜೆ ಪಡೆದುಕೊಂಡು ಬಂದು ಜಮೀನಿನಲ್ಲಿ ಕೆಲಸ ಮಾಡುತ್ತಾರೆ.
ಬೆಂಗಳೂರಲ್ಲಿ ಸಾಫ್ಟವೇರ್ ಉದ್ಯೋಗಿ, ಬಾಗಲಕೋಟೆಯಲ್ಲಿ ರೈತ ಸರ್ಕಾರದ ಯೋಜನೆ ಸದುಪಯೋಗ ಪಡಿಸಿಕೊಂಡು, ಎಲ್ಲಾ ರೈತರು ಹೀಗೆ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಇಡೀ ಹುನಗುಂದ ತಾಲೂಕಿನ ರೈತರು ಪಂಜಾಬ್ ಮಾದರಿಯಲ್ಲಿ ಅಭಿವೃದ್ಧಿ ಹೊಂದಬಹುದು ಎಂಬುದು ಸಿದ್ದಪ್ಪ ಬಂಡಿ ಅವರ ಸಲಹೆಯಾಗಿದೆ.
ಇದನ್ನೂ ಓದಿ:ಮಂಡ್ಯದಲ್ಲಿ ಭೀಕರ ಅಪಘಾತ: ಇತ್ತೀಚೆಗಷ್ಟೇ ಮದುವೆಯಾದ ನವ ಜೋಡಿ ಸೇರಿ ಮೂವರ ದುರ್ಮರಣ