ಟೋಕಿಯೋ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು 1-0 ಗೋಲುಗಳ ಅಂತರದಿಂದ ಮಣಿಸಿರುವ ಭಾರತದ ಮಹಿಳಾ ಹಾಕಿ ತಂಡ ಸೆಮಿಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಹಾಕಿ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ ಬಗ್ಗು ಬಡಿದ 'ಭಾರತೀ'ಯರು ಐತಿಹಾಸಿಕ ಸಾಧನೆ ಮಾಡಿದರು.
ಪಂದ್ಯದ ಮೊದಲಾರ್ಧದಲ್ಲಿ ಗುರ್ಜಿತ್ ಕೌರ್ ಪೆನಾಲ್ಟಿ ಕಾರ್ನರ್ ಮೂಲಕ ಒಂದು ಗೋಲು ಹೊಡೆದು ಗೆಲುವಿಗೆ ಬುನಾದಿ ಹಾಕಿದರು. ಆಸ್ಟ್ರೇಲಿಯಾ ತಂಡ ಗೋಲು ಹೊಡೆಯಲು ಎಷ್ಟೇ ಪ್ರಯತ್ನಿಸಿದರೂ, ಭಾರತ ತಂಡ ಅದಕ್ಕೆ ಅವಕಾಶ ಮಾಡಿಕೊಡದೇ ಅತ್ಯುತ್ತಮವಾಗಿ ಪ್ರದರ್ಶನ ನೀಡಿತು.
1980ರಲ್ಲಿ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ನಾಲ್ಕನೇ ಸ್ಥಾನ ಪಡೆದಿತ್ತು. ಅದಾದ ಬಳಿಕ ಬರೋಬ್ಬರಿ ನಾಲ್ಕು ದಶಕಗಳ ಬಳಿಕ ಇಂದು ಭಾರತದ ಮಹಿಳೆಯರು ಈ ಸಾಧನೆ ಮಾಡಿದರು. ಜಗತ್ತಿನ ನಂಬರ್ 1 ತಂಡದ ವಿರುದ್ಧ ಅಮೋಘ ಪ್ರದರ್ಶನ ನೀಡಿರುವ ಭಾರತೀಯ ಆಟಗಾರ್ತಿಯರು ಭರ್ಜರಿ ಗೆಲುವು ದಾಖಲಿಸಿ ಭಾವುಕರಾದರು.
ಆಗಸ್ಟ್ 4ರಂದು ಅರ್ಜೆಂಟೀನಾ ವಿರುದ್ಧ ಸೆಮಿಫೈನಲ್
ಆಗಸ್ಟ್ 4ರಂದು ನಡೆಯಲಿರುವ ಸೆಮಿಫೈನಲ್‌ನಲ್ಲಿ ಭಾರತ ತಂಡವು ಅರ್ಜೆಂಟೀನಾ ಸವಾಲು ಎದುರಿಸಲಿದೆ. ಮಗದೊಂದು ಕ್ವಾರ್ಟರ್ ಫೈನಲ್ನಲ್ಲಿ ಅರ್ಜೆಂಟೀನಾ ತಂಡವು ಜರ್ಮನಿ ವಿರುದ್ಧ 3-0 ಗೋಲುಗಳ ಅಂತರದ ಗೆಲುವು ದಾಖಲಿಸಿದೆ. ಆ ಪಂದ್ಯ ಗೆದ್ದರೆ ಚಿನ್ನಕ್ಕಾಗಿ ಆಗಸ್ಟ್ 6ರಂದು ಭಾರತ ತಂಡ ಕಣಕ್ಕಿಳಿಯಲಿದೆ.
ಈಗ ಪುರುಷರ ಹಾಕಿ ಬಳಿಕ ಮಹಿಳಾ ಹಾಕಿ ವಿಭಾಗದಲ್ಲೂ ಭಾರತ ಸೆಮಿಫೈನಲ್‌ಗೇರಿದ ಸಾಧನೆ ಮಾಡಿದೆ. ಗೆಲುವಿನ ಬಳಿಕ ರಾಣಿ ರಾಂಪಾಲ್ ಪಡೆ ಕುಣಿದು ಕುಪ್ಪಳಿಸಿ ಸಂಭ್ರಮಾಚರಣೆ ಮಾಡಿದರು. ಮಹಿಳಾ ತಂಡದ ಈ ಸಾಧನೆಗೆ ಗಣ್ಯಾತಿಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
"ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಪಿವಿ ಸಿಂಧೂ ಮಾತ್ರ ಅರ್ಹರಲ್ಲ. ಇದರ ಜೊತೆಗೆ ಹಾಕಿಯಲ್ಲಿ ಪುರುಷ ಹಾಗೂ ಮಹಿಳೆಯರ ಭಾರತ ಹಾಕಿ ತಂಡಗಳ ಐತಿಹಾಸಿಕ ಪ್ರಯತ್ನವನ್ನು ನಾವು ಕಣ್ತುಂಬಿಕೊಳ್ಳುತ್ತಿದ್ದೇವೆ. 130 ಕೋಟಿ ಭಾರತೀಯರು ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಾಗ ಭಾರತ ಹಾಕಿ ತಂಡವು ಹೊಸ ಎತ್ತರಕ್ಕೆ ತಲುಪುತ್ತಿರುವುದನ್ನು ನೋಡಲು ಸಂತಸವಾಗಿದೆ," ಎಂದು ಮೋದಿ ಟ್ವೀಟ್ ಮಾಡಿದ್ದಾರೆ.