ಟೋಕಿಯೋ ಒಲಿಂಪಿಕ್ಸ್ 2020 ರಲ್ಲಿ ಇತಿಹಾಸ ಸೃಷ್ಟಿಸಿದ ಒಂದು ದಿನದ ನಂತರ, ಜಾವೆಲಿನ್ ಪಟು ನೀರಜ್ ಚೋಪ್ರಾ ಭಾನುವಾರ ತಮ್ಮ ಮೊದಲ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದಾರೆ. ವೇದಿಕೆಯ ಮೇಲ್ಭಾಗದಲ್ಲಿ ತನ್ನ ಕುತ್ತಿಗೆಯನ್ನು ಅಲಂಕರಿಸಿದ ಚಿನ್ನದ ಪದಕದೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಭಾರತೀಯರ ನಿರಂತರ ಬೆಂಬಲ ಮತ್ತು ಆಶೀರ್ವಾದಕ್ಕೆ ಅವರು ಧನ್ಯವಾದಗಳನ್ನು ಅರ್ಪಿಸಿದರು. "ಈ ಭಾವನೆ ನನ್ನೊಂದಿಗೆ ಶಾಶ್ವತವಾಗಿ ಉಳಿಯುತ್ತದೆ" ಎಂದು ಬರೆದುಕೊಂಡಿದ್ದಾರೆ.
23 ವಯಸ್ಸಿನ ನೀರಜ್ ಚೋಪ್ರಾ 86.59 ಮೀಟರ್‌ಗಳ ಮೊದಲ ಸುತ್ತಿನ ಎಸೆತದೊಂದಿಗೆ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದರು ಮತ್ತು ಫೈನಲ್‌ನಲ್ಲಿ 87.58 ಮೀಟರ್ ಎಸೆದು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದು ತಂದರು. 100 ವರ್ಷಗಳ ಇತಿಹಾಸದಲ್ಲಿ ಅಥ್ಲೆಟಿಕ್ಸ್‌ನಲ್ಲಿ ಇದು ದೇಶದ ಮೊದಲ ಬಂಗಾರದ ಪದಕವಾಗಿದೆ.
ಅಲ್ಲದೇ ನೀರಜ್ ತಮ್ಮ ಈ ವಿಜಯದ ಬಳಿಕ ನವೆಂಬರ್ 15,2017 ರ ಟ್ವೀಟ್ ಒಂದನ್ನು ಪಿನ್ ಮಾಡಿಕೊಂಡಿದ್ದಾರೆ. ಇದರಲ್ಲಿ ಅವರು, "ಯಾವಾಗ ನಿಮಗೆ ಸಾಧನೆಯ ಬಯಕೆ ನಿದ್ದೆಗೆ ಜಾರಲು ಬಿಡುವುದಿಲ್ಲವೋ ಆಗ ಪರಿಶ್ರಮದ ಹೊರತು ಬೇರೇನೂ ಬೇಕೆನಿಸುವುದಿಲ್ಲ. ಯಾವಾಗ ಕಠಿಣ ಮತ್ತು ನಿರಂತರ ಕೆಲಸದ ಹೊರತಾಗಿಯೂ ನಿಮಗೆ ಸುಸ್ತು ಎನಿಸುವುದಿಲ್ಲವೋ, ಆಗ ನೀವು ಸಾಧನೆಯ ಹೊಸ ಇತಿಹಾಸ ನಿರ್ಮಿಸುತ್ತೀರಿ ಎಂದುಕೊಳ್ಳಿ" ಎಂದು ಬರೆದಿದ್ದಾರೆ.
ಓದಿ:ಅಥ್ಲೆಟಿಕ್ಸ್ ದಿಗ್ಗಜ ಮಿಲ್ಖಾ ಸಿಂಗ್ ಕನಸು ನನಸಾಗಿಸಿದ 'ಬಂಗಾರ'ದ ಬಾಹು ನೀರಜ್ ಚೋಪ್ರಾ..