ನ್ಯೂಯಾರ್ಕ್: ವಿಶ್ವದ ನಂ.1 ಟೆನ್ನಿಸ್ ಆಟಗಾರ ನೊವಾಕ್ ಜೊಕೊವಿಕ್ ಯುಎಸ್ ಓಪನ್‌ನಿಂದ ಅನಿರೀಕ್ಷಿತವಾಗಿ ನಿರ್ಗಮಿಸಿದ್ದಾರೆ.
ಜೊಕೊವಿಕ್ ಹೊಡೆದ ಚೆಂಡು ಲೈನ್ ಜಡ್ಜ್ ಗಂಟಲಿಗೆ ಬಡಿದಿದೆ. ಈ ಕೃತ್ಯ ಉದ್ದೇಶಪೂರ್ವಕವಾಗಿ ನಡೆದಿಲ್ಲದಿದ್ದರೂ ಚೆಂಡು ಬಲವಾಗಿ ಬಡಿದ ಕಾರಣಕ್ಕೆ ಮಹಿಳಾ ಜಡ್ಜ್ ಕುಸಿದು ಬಿದ್ದಿದ್ದಾರೆ. ಜೊಕೊವಿಕ್ ಮತ್ತು ಪ್ಯಾಬ್ಲೊ ಕ್ಯಾರೆನೊ ಬುಸ್ಟಾ ನಡುವೆ ಪಂದ್ಯ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಯುಎಸ್ ಓಪನ್‌ನಿಂದ ಜೊಕೊವಿಕ್ ಅನರ್ಹ ಪಂದ್ಯದ ನಂತರ ಮಾಧ್ಯಮ ಹೇಳಿಕೆ ನೀಡದ ಜೊಕೊವಿಕ್, ಸಾಮಾಜಿಕ ಜಾಲತಾಣದ ಮೂಲಕ ಕ್ಷಮೆಯಾಚಿಸಿದ್ದಾರೆ. "ಈ ಇಡೀ ಪರಿಸ್ಥಿತಿಯು ನನಗೆ ನಿಜವಾಗಿಯೂ ದುಃಖ ತರಿಸಿದೆ" ಎಂದು ಜೊಕೊವಿಕ್ ಬರೆದಿದ್ದಾರೆ. "ನಾನು ಅವರನ್ನು ಪರಿಶೀಲಿಸಿದ್ದೇನೆ, ದೇವರಿಗೆ ಧನ್ಯವಾದ ಹೇಳುತ್ತೇನೆ. ಅವರು ಆರೋಗ್ಯವಾಗಿದ್ದಾರೆ. ಅವರಿಗೆ ಅಂತಹ ಒತ್ತಡವನ್ನು ಉಂಟುಮಾಡಿದ್ದಕ್ಕೆ ನನಗೆ ತುಂಬಾ ವಿಷಾದವಿದೆ. ಅವರ ಗೌಪ್ಯತೆಯನ್ನು ಗೌರವಿಸಲು ನಾನು ಅವರ ಹೆಸರನ್ನು ಬಹಿರಂಗಪಡಿಸುತ್ತಿಲ್ಲ. ಅನರ್ಹತೆಗೆ ಸಂಬಂಧಿಸಿದಂತೆ, ನಾನು ಹಿಂತಿರುಗಿ ನನ್ನ ನಿರಾಶೆಯ ಬಗ್ಗೆ ಕೆಲಸ ಮಾಡಬೇಕಾಗಿದೆ ಮತ್ತು ಆಟಗಾರ ಹಾಗೂ ಮನುಷ್ಯನಾಗಿ ನನ್ನ ಬೆಳವಣಿಗೆ ಮತ್ತು ವಿಕಾಸದ ಪಾಠವಾಗಿ ಈ ಎಲ್ಲವನ್ನು ಒಪ್ಪಿಕೊಳ್ಳಬೇಕಿದೆ" ಎಂದಿದ್ದಾರೆ.
'ನನ್ನ ನಡವಳಿಕೆಗೆ ಸಂಬಂಧಿಸಿದಂತೆ ಯುಎಸ್ ಓಪನ್ ಪಂದ್ಯಾವಳಿ ಮತ್ತು ಎಲ್ಲರಿಗೂ ನಾನು ಕ್ಷಮೆಯಾಚಿಸುತ್ತೇನೆ. ನನಗೆ ಬೆಂಬಲವಾಗಿ ನಿಂತ ನನ್ನ ತಂಡ ಮತ್ತು ಕುಟುಂಬಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ ಮತ್ತು ನನ್ನ ಅಭಿಮಾನಿಗಳು ಯಾವಾಗಲೂ ನನ್ನೊಂದಿಗೆ ಇರುವುದಕ್ಕೆ ಧನ್ಯವಾದಗಳು ಮತ್ತು ನನ್ನನ್ನು ಕ್ಷಮಿಸಿ "ಎಂದು ಅವರು ಬರೆದುಕೊಂಡಿದ್ದಾರೆ.