ಬೆಂಗಳೂರು: ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯ ಡಬಲ್ಸ್ನಲ್ಲಿ ಭಾರತದ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಇಂಡೋನೇಷ್ಯಾದ ಕ್ರಿಸ್ಟೋಫರ್ ರಂಗ್ಕತ್ ಹಾಗೂ ಸ್ವೀಡನ್ನ ಆ್ಯಂಡ್ರೆ ಗೊರಾಸನ್ ಅವರನ್ನು ಸೋಲಿಸಿ ಸೆಮಿಫೈನಲ್ಸ್ಗೆ ಲಗ್ಗೆ ಇಟ್ಟಿದ್ದಾರೆ.
ಗುರುವಾರ ನಡೆದ ಕ್ವಾರ್ಟರ್ ಪೈನಲ್ಸ್ ಪಂದ್ಯದಲ್ಲಿ ಪೇಸ್ ಮತ್ತು ಮ್ಯಾಥ್ಯೂ 7-5, 0-6,10-7 ರ ಅಂತರದಲ್ಲಿ ಇಂಡೋನೇಷ್ಯಾದ ಕ್ರಿಸ್ಟೋಫರ್ ರಂಗ್ಕತ್ ಹಾಗೂ ಸ್ವೀಡನ್ನ ಆ್ಯಂಡ್ರೆ ಗೊರಾಸನ್ ಅವರನ್ನು ಪರಾಭವಗೊಳಿಸಿದರು.
ಭಾರತದ ಸಿಂಗಲ್ಸ್ ಆಟಗಾರರಾದ ಪ್ರಜ್ನೇಶ್ ಗುನ್ನೇಶ್ವರ, ಸುಮಿತ್ ನಾಗಲ್, ರಾಮ್‌ಕುಮಾರ್ ರಾಮನಾಥನ್, ಸಕೇತ್ ಮೈನೆನಿ, ನಿಕ್ಕಿ ಪೊಣಚ್ಚ ಮತ್ತು ಸಿದ್ಧಾರ್ಥ್ ರಾವತ್ ಸೋತು ಪಂದ್ಯದಿಂದ ಹೊಗುಳಿದಿದ್ದಾರೆ.
ಸಿಂಗಲ್ಸ್ನಲ್ಲಿ ಅಗ್ರಮಾನ್ಯ ಟೆನಿಸ್ ಆಟಗಾರ ಪ್ರಜ್ನೇಶ್, ಫ್ರಾನ್ಸ್ ಬೆಂಜಮಿನ್ ಬೊಂಜಿ ವಿರುದ್ಧ 6-7 (5-7), 0-6 ಸೆಟ್ಗಳಲ್ಲಿ ಸೋಲು ಕಂಡರು. ಸುಮಿತ್ ನಗಾಲ್, ಸ್ಲೋವೇನಿಯಾದ ಬ್ಲಾಜ್ ರೋಲಾ ಎದುರು 6-3, 6-3 ಸೆಟ್ಗಳಲ್ಲಿ ಪರಾಜಯ ಕಂಡರು. ಮೊದಲ ಸೆಟ್ನಲ್ಲೇ ಎಡವಿದ ಸುಮಿತ್ ಪಂದ್ಯದಿಂದ ಹೊರಗುಳಿದರು.
ಉಳಿದಂತೆ ರಾಮ್‌ಕುಮಾರ್ ರಾಮನಾಥನ್, ಬೇಲಾರಸ್ನ ಇಲ್ಯಾ ಇವಾಶ್ಕ ವಿರುದ್ಧ 6-7(2-7), 1-6 ಸೆಟ್ಗಳಲ್ಲಿ ಸೋತರು. ನಿಕ್ಕಿ ಪೊಣಚ್ಚ ಜಪಾನ್ನ ಯುಚಿ ಸುಗಿತಾ ವಿರುದ್ಧ 5-7, 4-6 ಸೆಟ್ಗಳಲ್ಲಿ ಪರಾಜಯ ಕಂಡರು.