ಐಲ್ ಆಫ್ ಮಾನ್ (ಯುಕೆ):ಇಲ್ಲಿ ನಡೆಯುತ್ತಿರುವ ಫಿಡೆ ಮಹಿಳೆಯರ ಗ್ರ್ಯಾಂಡ್ ಸ್ವಿಸ್ ಪಂದ್ಯಾಟದಲ್ಲಿ ಉಕ್ರೇನ್ನ ಮಾಜಿ ವಿಶ್ವ ಚಾಂಪಿಯನ್ ಮರಿಯಾ ಮಝಿಚುಕ್ ಅವರನ್ನು ಭಾರತದ ಆರ್.ವೈಶಾಲಿ ಮಣಿಸಿದ್ದಾರೆ. ಪಂದ್ಯದ ನಾಲ್ಕನೇ ಸುತ್ತಿನಲ್ಲಿ 3.5 ಅಂಕ ಗಳಿಸುವ ಮೂಲಕ ವೈಶಾಲಿ ಮಝಿಚುಕ್ ಗೆಲುವಿನ ನಗೆ ಬೀರಿದರು. ಆರ್.ವೈಶಾಲಿ ಭಾರತದ ಅತಿ ಕಿರಿಯ ಚೆಸ್ ಚಾಂಪಿಯನ್ ಆರ್.ಪ್ರಗ್ನಾನಂದ್ ಅವರ ಸಹೋದರಿ. ಇವರು ಇದಕ್ಕೂ ಮೊದಲು ಕತಾರ್ನಲ್ಲಿ ನಡೆದ ಗ್ರ್ಯಾಂಡ್ ಮಾಸ್ಟರ್ ಅರ್ಹತಾ ಪಂದ್ಯದಲ್ಲಿ ಮೂರನೇ ಸ್ಥಾನ ಪಡೆದಿದ್ದರು.
ಶನಿವಾರ ನಡೆದ ಪಂದ್ಯದಲ್ಲಿ ವೈಶಾಲಿ ಫಿಡೆ ಮಹಿಳೆಯರ ಗ್ರ್ಯಾಂಡ್ ಸ್ವಿಸ್ನ ಪಂದ್ಯದಲ್ಲಿ ಉಕ್ರೇನ್ನ ಮರಿಯಾ ಮಝಿಚುಕ್ ವಿರುದ್ಧ ಆಕ್ರಮಕಾರಿ ಆಟ ಪ್ರದರ್ಶಿಸಿದರು. ನಾಲ್ಕು ಸುತ್ತುಗಳ ಪಂದ್ಯದಲ್ಲಿ ವೈಶಾಲಿ ಪ್ರಬಲ ಪೈಪೋಟಿ ನೀಡಿದರು. ನಾಲ್ಕನೇ ಸುತ್ತಿನಲ್ಲಿ ವೈಶಾಲಿ ಅವರು ಮಝಿಚುಕ್ ಅವರನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಎಲ್ಲಾ ಸುತ್ತಿನ ಪಂದ್ಯಗಳಲ್ಲಿ ಮರಿಯಾ ಮಝಿಚುಕ್ ವಿರುದ್ಧ ಮೇಲುಗೈ ಸಾಧಿಸುತ್ತಾ ಸಾಗಿದ ವೈಶಾಲಿ, ಕೇವಲ 23 ನಡೆಗಳಲ್ಲಿ ಮಝಿಚುಕ್‌ರನ್ನು ಚೆಕ್ಮೇಟ್ ಮಾಡಿದರು. ಈ ಮೂಲಕ ಸ್ವಿಸ್ ಪಂದ್ಯಾಟದ ನಾಲ್ಕು ಪಂದ್ಯಗಳಲ್ಲಿ 3 ಮೂರು ಪಂದ್ಯಗಳನ್ನು ಜಯಿಸಿದ್ದಾರೆ.