ವಿಜ್ಕ್ ಆನ್ ಝೀ (ನೆದರ್ಲ್ಯಾಂಡ್ಸ್):ಚೆಸ್ ಸೆನ್ಸೇಷನ್, ಯುವ ಗ್ರ್ಯಾಂಡ್ ಮಾಸ್ಟರ್ ಆರ್ ಪ್ರಜ್ಞಾನಂದ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಅವರನ್ನು ಹಿಂದಿಕ್ಕಿ ಭಾರತದ ನಂ.1 ಚೆಸ್ ಆಟಗಾರರಾಗಿದ್ದಾರೆ. ಪ್ರಜ್ಞಾನಂದ ಅವರ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಅಗ್ರಮಾನ್ಯ ಆಟಗಾರನಾಗಿ ನಿಂತಿದ್ದಾರೆ. ನೆದರ್ಲ್ಯಾಂಡ್ಸ್ನಲ್ಲಿ ಬುಧವಾರ ನಡೆದ ಟಾಟಾ ಸ್ಟೀಲ್ ಮಾಸ್ಟರ್ಸ್ ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ (ಚೀನಾ) ಅವರನ್ನು ಸೋಲಿಸುವ ಮೂಲಕ ಅವರು ಈ ಗೌರವ ಪಡೆದುಕೊಂಡರು.
ಪ್ರಸ್ತುತ FIDE ಶ್ರೇಯಾಂಕದ ಪ್ರಕಾರ ಪ್ರಜ್ಞಾನಂದ 2748.3 ಅಂಕಗಳೊಂದಿಗೆ 11 ನೇ ಸ್ಥಾನದಲ್ಲಿದ್ದಾರೆ - ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಅವರು 2748 ಅಂಕಗಳೊಂದಿಗೆ 12 ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಈ ಅಂಕಗಳ ಆಧಾರದ ಮೇಲೆ ಪ್ರಜ್ಞಾನಂದ ಭಾರತದ ಅಗ್ರಮಾನ್ಯ ಆಟಗಾರ ಎನಿಸಿಕೊಂಡಿದ್ದಾರೆ. ಈ ದಾಖಲೆ ಬರೆದ ಪ್ರಜ್ಞಾನಂದ ಅವರಿಗೆ ದೇಶ ಮಾತ್ರವಲ್ಲದೆ ವಿಶ್ವದಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಟಾಟಾ ಸ್ಟೀಲ್ ಮಾಸ್ಟರ್ಸ್ ಈವೆಂಟ್‌ನಲ್ಲಿ ಗೆಲುವು: ಆರ್ ಪ್ರಜ್ಞಾನಂದ ಅವರು ಟಾಟಾ ಸ್ಟೀಲ್ ಮಾಸ್ಟರ್ಸ್ ಚೆಸ್ ಸ್ಪರ್ಧೆಯಲ್ಲಿ ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ಅವರನ್ನು ಸೋಲಿಸಿದ್ದಾರೆ. ಕಳೆದ ವರ್ಷ ಇದೇ ಈವೆಂಟ್‌ನಲ್ಲಿ ಪ್ರಜ್ಞಾನಂದ ಮೊದಲ ಬಾರಿಗೆ ಡಿಂಗ್ ಲಿರೆನ್‌ನನ್ನು ಸೋಲಿಸಿದ್ದು ಗಮನಾರ್ಹ. ಇದೀಗ ಮತ್ತೊಮ್ಮೆ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಭರ್ಜರಿ ಗೆಲುವಿನ ಮೂಲಕ ಪ್ರಜ್ಞಾನಂದ FIDE ಲೈವ್ ರೇಟಿಂಗ್‌ನಲ್ಲಿ ವಿಶ್ವನಾಥನ್ ಆನಂದ್ ಅವರನ್ನು ಹಿಂದಿಕ್ಕಿ ಮುಂದೆ ಸಾಗುವ ಮೂಲಕ ನಂಬರ್ ಒನ್ ಆಟಗಾರ ಎನಿಸಿಕೊಂಡಿದ್ದಾರೆ. ಪ್ರಜ್ಞಾನಂದ ಅವರು ಡಿಂಗ್ ಲಿರೆನ್ ಅವರನ್ನು ಸೋಲಿಸಿದ ಎರಡನೇ ಭಾರತೀಯ ಆಟಗಾರರಾಗಿದ್ದಾರೆ.
ಪ್ರಜ್ಞಾನಂದರನ್ನು ಹೊಗಳಿದ ಗೌತಮ್ ಅದಾನಿ:ದೇಶದ ಮೂಲೆ ಮೂಲೆಯಿಂದ ಆರ್ ಪ್ರಜ್ಞಾನಂದ್ ಅವರು ಅಭಿನಂದನೆಗಳನ್ನು ಸ್ವೀಕರಿಸುತ್ತಿದ್ದಾರೆ. ಈ ಸಂಚಿಕೆಯಲ್ಲಿ, ಭಾರತದ ದೊಡ್ಡ ಉದ್ಯಮಿಗಳಲ್ಲೊಬ್ಬರಾದ ಗೌತಮ್ ಅದಾನಿ ಕೂಡ ಆರ್ ಪ್ರಜ್ಞಾನಂದರನ್ನು ಹೊಗಳಿ ಟ್ವೀಟ್ ಮಾಡಿದ್ದಾರೆ. ಅದಾನಿ ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಪ್ರಜ್ಞಾನಂದ ಅವರನ್ನು ಅಭಿನಂದಿಸಿದ್ದಾರೆ. ‘ಪ್ರಜ್ಞಾನಂದರನ್ನು ಬೆಂಬಲಿಸಲು ಹೆಮ್ಮೆ ಎನಿಸುತ್ತಿದೆ. ಅವರು ಬಹಳ ವೇಗವಾಗಿ ಪ್ರಗತಿ ಹೊಂದುತ್ತಿದ್ದಾರೆ. ಇದು ಎಲ್ಲಾ ದೇಶವಾಸಿಗಳಿಗೆ ಮಾದರಿಯಾಗಿದೆ ಎಂದು ಬರೆದುಕೊಂಡಿದ್ದಾರೆ.
ಓದಿ:ಫಿಡೆ ಕ್ಯಾಂಡಿಡೇಟ್ಸ್ ಟೂರ್ನಮೆಂಟ್ 2024 : ಮೊದಲ ಬಾರಿಗೆ ಐವರು ಭಾರತೀಯರು ಸ್ಪರ್ಧೆ