ಹ್ಯಾಂಗ್ಝೌ: ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯನ್ ಗೇಮ್ಸ್ನ ಮೂರನೇ ದಿನ ಜಾವಲಿನ್ ಥ್ರೋನಲ್ಲಿ ಭಾರತ ಚಿನ್ನದ ಪದಕ ಗೆದ್ದಿದೆ. ಪುರುಷರ ಎಫ್37 ಈವೆಂಟ್‌ನಲ್ಲಿ ಭಾರತದ ಹ್ಯಾನಿ 55.97 ಮೀಟರ್ ದೂರ ಭರ್ಜಿ ಎಸೆಯುವ ಮೂಲಕ ಹಿಂದಿನ 46.28 ಮೀಟರ್‌ಗಳ ಪ್ಯಾರಾ ಏಷ್ಯನ್ ಗೇಮ್ಸ್ ದಾಖಲೆಯನ್ನು ಮುರಿದಿದ್ದಾರೆ. ಇವರ ಹೊರತಾಗಿ ಭಾರತ್ ಬಾಬಿ ಕೂಡ ಇದೇ ಸ್ಪರ್ಧೆಯಲ್ಲಿ 42.23 ಮೀಟರ್‌ಗಳೊಂದಿಗೆ ಆರನೇ ಸ್ಥಾನ ಪಡೆದಿದ್ದಾರೆ.
ಇದಕ್ಕೂ ಮೊದಲು ಸುಮಿತ್ ಆಂಟಿಲ್ ಮತ್ತು ಪುಷ್ಪೇಂದ್ರ ಸಿಂಗ್ ಅವರು ಪುರುಷರ ಎಫ್ 64 ಜಾವೆಲಿನ್ ಥ್ರೋ ಈವೆಂಟ್‌ನಲ್ಲಿ ಕ್ರಮವಾಗಿ ಚಿನ್ನ ಮತ್ತು ಕಂಚಿನ ಪದಕಗಳನ್ನು ಜಯಿಸಿದ್ದಾರೆ. ಆಂಟಿಲ್ 73.29 ಮೀಟರ್ ದೂರ ಭರ್ಜಿ ಎಸೆಯುವ ಮೂಲಕ ತಮ್ಮದೇ ಆದ ವಿಶ್ವ ದಾಖಲೆಯನ್ನು ಮುರಿದರು. ಮೊದಲ ಥ್ರೋನಲ್ಲಿ 66.22 ಮೀ ಎಸೆಯುವುದರೊಂದಿಗೆ ಪ್ರಾರಂಭಿಸಿದ ಅವರು ಎರಡನೇ ಪ್ರಯತ್ನದಲ್ಲಿ 70.48 ಮೀಟರ್ ಮತ್ತು ಅಂತಿಮವಾಗಿ ಮೂರನೇ ಪ್ರಯತ್ನದಲ್ಲಿ 73.29 ಮೀ ದೂರ ಭರ್ಜಿ ಎಸೆದು ತಮ್ಮದೆ ಆದ ದಾಖಲೆ ಮುರಿದು ಚಿನ್ನದ ಪದಕವನ್ನು ಗೆದ್ದರು.
ಟೇಬಲ್ ಟೆನಿಸ್ನಲ್ಲಿ ಕಂಚು:ಪುರುಷರ ಟೇಬಲ್ ಟೆನಿಸ್ ಸಿಂಗಲ್ಸ್ ವಿಭಾಗದಲ್ಲಿ ಸಂದೀಪ್ ಡಾಂಗಿ ಅದ್ಭುತ ಪ್ರದರ್ಶನ ತೋರಿ ಕಂಚಿನ ಪದಕವನ್ನು ಗೆದ್ದಿದ್ದಾರೆ. ಮತ್ತೊಂದೆಡೆ ಬ್ಯಾಡ್ಮಿಂಟನ್ ಮಿಶ್ರ ಡಬಲ್ಸ್ SL3-SU5ನಲ್ಲಿ ತುಳಸಿಮತಿ ಮುರುಗೇಶನ್ ಜೋಡಿ ಕಂಚಿನ ಪದಕವನ್ನು ಗೆದ್ದಿದ್ದಾರೆ
ಡಿಸ್ಕಸ್ ಥ್ರೋನಲ್ಲಿ ಭಾರತಕ್ಕೆ ಬೆಳ್ಳಿ:ಮಹಿಳೆಯರ ಡಿಸ್ಕಸ್ ಥ್ರೋ-F54/55 ಈವೆಂಟ್‌ನಲ್ಲಿ ಭಾರತದ ನಾರಿ ಪೂಜಾ ಅವರು 18.17 ಎಸೆತದೊಂದಿಗೆ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.