ನವದೆಹಲಿ: ಭಾರತದ ಕ್ರೀಡಾ ಸಚಿವ ಕಿರಣ್ ರಿಜಿಜು ಪ್ರತಿಭಾವಂತ ಕ್ರೀಡಾಪಟುಗಳನ್ನು ಹೊರ ತರುವ ಕೆಲಸವನ್ನು ದಿನದಿಂದ ದಿನಕ್ಕೆ ಹೆಚ್ಚಿನ ರೀತಿಯಲ್ಲಿ ಮಾಡುತ್ತಿದ್ದಾರೆ.
ಭಾರತ ಕ್ರೀಡಾ ಸಚಿವರಾದ ಕಿರಣ್ ರಿಜಿಜು ಟ್ವಿಟರ್ನಲ್ಲಿ ದೇಶದ ಯಾವುದೇ ಪ್ರದೇಶದಲ್ಲಿ ಯಾವುದೇ ಕ್ರೀಡೆಯಲ್ಲಾದರೂ ಪ್ರತಿಭೆಯುಳ್ಳವರು ಅವರ ಸಾಮರ್ಥ್ಯ ಬಿಂಬಿಸುವ ವಿಡಿಯೋವನ್ನು ಸಾಮಾಜಿಕ ಜಾಲತಾಣದ ಮೂಲಕ ತಮಗೆ ಕಳುಹಿಸಿದ್ರೇ ತಕ್ಷಣಕ್ಕೆ ಅದಕ್ಕೆ ಸ್ಪಂದಿಸುತ್ತಿದ್ದಾರೆ. ಪ್ರತಿಭೆಗಳಿಗೆ ಬೇಕಾದ ಅಗತ್ಯ ಕ್ರೀಡಾ ಸೌಲಭ್ಯ ಕಲ್ಪಿಸೋ ಕುರಿತಂತೆ ಟ್ವಿಟರ್‌ನಲ್ಲಿಯೇ ಪ್ರತಿಕ್ರಿಯಿಸುತ್ತಿದ್ದು, ಕ್ರೀಡಾಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಭರವಸೆ ನೀಡುತ್ತಿದ್ದಾರೆ.
ಇದೇ ರೀತಿ ಸಾಮಾಜಿಕ ಜಾಲ ತಾಣದಲ್ಲಿ ಶಾಲಾ ಬಾಲಕಿ ಹಾಗೂ ಬಾಲಕ ದಾರಿ ಮಧ್ಯೆ ಗಾಳಿಯಲ್ಲಿ ಹಾರುವ ಸ್ಟಂಟ್ ಮಾಡಿರುವ ವಿಡಿಯೋ ಹರಿದಾಡಿತ್ತು. ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಎಂವಿ ರಾವ್ ಎಂಬುವರು ಸೇರಿದಂತೆ ಹಲವರು ಕಿರಣ್ ರಿಜಿಜು ಅವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿರುವ ಅವರು ಈ ಮಕ್ಕಳನ್ನು ಹುಡುಕಿ ನನ್ನ ಹತ್ತಿರ ಕಳುಹಿಸಿಕೊಡಿ, ನಾನು ಅವರಿಗೆ ಜಿಮ್ನಾಸ್ಟಿಕ್ ಕ್ರೀಡೆಯಲ್ಲಿ ಅಗತ್ಯ ತರಬೇತಿ ಕೊಡಿಸುವ ಕೆಲಸ ಮಾಡುವೆ ಎಂದು ಟ್ವೀಟ್ ಮಾಡಿದ್ದಾರೆ.
ವಿಡಿಯೋದಲ್ಲಿರೋರು ನಾಗಾಲ್ಯಾಂಡ್ನ ಚುಮುಕೆಡಿಮಾ ಸರ್ಕಾರಿ ಶಾಲೆಯ ಮಕ್ಕಳು ಎನ್ನಲಾಗುತ್ತಿದೆ. ಆದರೆ, ಈ ವಿಡಿಯೋ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಇನ್ನೂ ಚರ್ಚೆ ನಡೆಯುತ್ತಿದೆ. ಮಕ್ಕಳ ಸ್ಟಂಟ್ ಬಗ್ಗೆ ಹಾಗೂ ಜನಸಾಮನ್ಯರ ಟ್ವೀಟ್ಗಳಿಗೆ ತಕ್ಷಣ ಸ್ಪಂದಿಸುವ ಸಚಿವರ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಮಂಗಳೂರಿನ ವೇಟ್ಲಿಫ್ಟಿಂಗ್ ಕ್ರೀಡಾಪಟು ದೀಪಿಕಾ ಪುತ್ರನ್ಗೆ ಹಣಕಾಸಿನ ನೆರವು ಹಾಗೂ ಬರಿಗಾಲಿನಲ್ಲಿಯೇ ಕೇವಲ 11 ಸೆಕೆಂಡ್‍ನಲ್ಲಿ 100 ಮೀಟರ್ ಓಡಿ ಎಲ್ಲರ ಗಮನಸೆಳೆದಿದ್ದ ಮಧ್ಯಪ್ರದೇಶದ ಶಿವಪುರಿ ನಿವಾಸಿಯಾಗಿರುವ 19 ವರ್ಷದ ರಾಮೇಶ್ವರ್ ಗುರ್ಜಾಗೆ ಬೇಕಾದ ಸೌಲಭ್ಯ ಒದಗಿಸಿಕೊಡುವ ಭರವಸೆ ನೀಡಿದ್ದರು ಕೇಂದ್ರ ಸಚಿವ ಕಿರಣ್ ರಿಜುಜು.