ನವದೆಹಲಿ:ಭಾರತದ ಗ್ರ್ಯಾಂಡ್ ಮಾಸ್ಟರ್ ಡಿ.ಗುಕೇಶ್ ಅವರು ವಿಶ್ವನಾಥನ್ ಆನಂದ್ ಅವರ 37 ವರ್ಷದ ದಾಖಲೆ ಮುರಿದು ಭಾರತದ ನಂ.1 ಚೆಸ್ ಶ್ರೇಯಾಂಕಿತ ಚೆಸ್ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಐದು ಬಾರಿಯ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್‌ರನ್ನು ಅಂತರರಾಷ್ಟ್ರೀಯ ಚೆಸ್ ಫೆಡರೇಶನ್ (FIDE) ನೀಡುವ ರೇಟಿಂಗ್‌ನಲ್ಲಿ ಗುಕೇಶ್ ಹಿಮ್ಮೆಟ್ಟಿಸಿದ್ದು, 8ನೇ ಸ್ಥಾನ ಗಳಿಸಿದ್ದಾರೆ.
ಜುಲೈ 1986ರಿಂದ ಆನಂದ್ ಭಾರತದ ನಂ.1 ಚೆಸ್ ಆಟಗಾರರಾಗಿದ್ದರು. ಆದರೆ, ಫಿಡೆ ಇಂದು ಬಿಡುಗಡೆ ಮಾಡಿದ ರ್‍ಯಾಂಕಿಂಗ್ ಪಟ್ಟಿಯಲ್ಲಿ 17 ವರ್ಷದ ಗುಕೇಶ್ 8ನೇ ಸ್ಥಾನ ಪಡೆದುಕೊಂಡಿದ್ದಾರೆ. ವಿಶ್ವನಾಥನ್ ಆನಂದ್ 9ನೇ ಶ್ರೇಯಾಂಕದಲ್ಲಿದ್ದಾರೆ. ರೇಟಿಂಗ್ ಪಟ್ಟಿಯಲ್ಲಿ ಭಾರತೀಯರಾದ ಗುಕೇಶ್ ಮತ್ತು ಆನಂದ್ ಟಾಪ್ 10ರಲ್ಲಿರುವ ಆಟಗಾರರು. ಗುಕೇಶ್ 7 ಅಂಕಗಳನ್ನು ಪಡೆದುಕೊಂಡು 2,758 ಅಂಕಗಳನ್ನು ಹೊಂದಿದರೆ, ವಿಶ್ವನಾಥನ್ ಆನಂದ್ 2,754 ಅಂಕಗಳನ್ನು ಹೊಂದಿದ್ದಾರೆ.
ಡಿ.ಗುಕೇಶ್ ಇತ್ತೀಚೆಗೆ ಅಜೆರ್ಬೈಜಾನ್ನ ಬಾಕುವಿನಲ್ಲಿ ನಡೆದ ಚೆಸ್ ವಿಶ್ವಕಪ್ನ ಕ್ವಾರ್ಟರ್ ಫೈನಲ್ನಲ್ಲಿ ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್‌ರನ್ನು ಎದುರಿಸಿ ವೀರೋಚಿತ ಸೋಲು ಕಂಡಿದ್ದರು. ಚೆಸ್ ವಿಶ್ವಕಪ್ನಲ್ಲಿ ಬೆಳ್ಳಿ ಪದಕ ಗೆದ್ದ ಪ್ರಜ್ಞಾನಂದ, ರ್‍ಯಾಂಕಿಂಗ್ ಪಟ್ಟಿಯಲ್ಲಿ 19ನೇ ಸ್ಥಾನದಲ್ಲಿದ್ದಾರೆ. ವಿಶ್ವಕಪ್ ಗೆದ್ದ ಮ್ಯಾಗ್ನಸ್ ಕಾರ್ಲ್‌ಸನ್ 2,839 ರೇಟಿಂಗ್ನಿಂದ ಅಗ್ರಸ್ಥಾನದಲ್ಲಿ ಭದ್ರವಾಗಿದ್ದಾರೆ.