ನವದೆಹಲಿ: 2022ರ ಆವೃತ್ತಿಯ ನಂತರ ಅಂತಾರಾಷ್ಟ್ರೀಯ ಟೆನ್ನಿಸ್ಗೆ ನಿವೃತ್ತಿ ಘೋಷಿಸುವುದಾಗಿ ಹೇಳಿರುವ ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ತಾವು ಕ್ರೀಡೆಯಿಂದ ದೂರವಾದ ನಂತರ ಕೋಚ್ ಅಥವಾ ಕಮೆಂಟೇಟರ್ ಆಗಿ ಮುಂದುವರಿಯಲು ಬಯಸುವುದಾಗಿ 'ಈಟಿವಿ ಭಾರತ'ದ ಎಕ್ಕ್ಲೂಸಿವ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಭಾರತ ಟೆನ್ನಿಸ್ ಕಂಡಂತಹ ಸೂಪರ್ ಸ್ಟಾರ್ಗಳಲ್ಲಿ ಒಬ್ಬರಾಗಿರುವ ಸಾನಿಯಾ, ತಮಗೆ ಟೆನಿಸ್ನಲ್ಲಿ ಮುಂದುವರಿಯಲು ದೇಹ ಸಹಕರಿಸುತ್ತಿಲ್ಲ, ಜೊತೆಗೆ ಮಗನನ್ನು ಕೋವಿಡ್ ತಾಂಡವವಾಡುತ್ತಿರುವ ಇಂತಹ ಪರಿಸ್ಥಿತಿಯಲ್ಲಿ ತಮ್ಮ ಜೊತೆ ವಿದೇಶ ಪ್ರಯಾಣದಲ್ಲಿ ಕರೆದುಕೊಂಡು ತಿರುಗಿ ಅಪಾಯಕ್ಕೆ ಆಹ್ವಾನ ನೀಡಲು ತಮಗೆ ಇಷ್ಟವಾಗುತ್ತಿಲ್ಲ. ಅದಕ್ಕೆ ನಿವೃತ್ತಿ ತೆಗೆದುಕೊಳ್ಳುವುದಾಗಿ ಆಸ್ಟ್ರೇಲಿಯನ್ ಓಪನ್ನ ವುಮೆನ್ಸ್ ಡಬಲ್ಸ್ನಲ್ಲಿ ಸೋಲು ಕಂಡ ಬಳಿಕ ನಿವೃತ್ತಿ ಘೋಷಿಸಿದ್ದರು.
'ಈಟಿವಿ ಭಾರತ'ದ ಜೊತೆ ಎಕ್ಸ್ಕ್ಲೂಸಿವ್ ಆಗಿ ಗುರುವಾರ ಮಾತನಾಡಿದ ಸಾನಿಯಾ ತಮ್ಮ ಕರಿಯರ್, ಆರಂಭದಲ್ಲಿ ತಾವೆದುರಿಸಿದ ಸವಾಲುಗಳು ಮತ್ತು ತಾವೂ ಟೆನಿಸ್ನಿಂದ ದೂರವಾದ ನಂತರ ಈ ಆಟದಲ್ಲಿ ಹೇಗೆ ಮುಂದುವರಿಯುತ್ತಾರೆ ಎಂಬ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಾವೂ ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ಭಾರತದಲ್ಲಿ ಟೆನ್ನಿಸ್ ಆಟ ಮಹಿಳೆಯರಿಗೆ ಅಸಾಧ್ಯ ಎಂಬ ಭಾವನೆಯಿತ್ತು ಎಂದು ಕೇವಲ 5ನೇ ವಯಸ್ಸಿಗೆ ಟೆನ್ನಿಸ್ ಅಭ್ಯಾಸ ಆರಂಭಿಸಿದ ಮತ್ತು ತಮ್ಮ 15ನೇ ವಯಸ್ಸಿನಲ್ಲಿ ವೃತ್ತಿಪರ ಟೆನ್ನಿಸ್ಗೆ ಕಾಲಿಟ್ಟ ಬಗ್ಗೆ ಸಾನಿಯಾ ಹೇಳಿದ್ದಾರೆ.
ಇದನ್ನೂ ಓದಿ:ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ; ಬೆಂಗಳೂರಿನಲ್ಲಿ ಅಹರ್ನಿಶಿ ಟೆಸ್ಟ್ ಆಯೋಜನೆ ಖಚಿತಪಡಿಸಿದ ಗಂಗೂಲಿ
"ನಾನು ನನ್ನ ವೃತ್ತಿ ಜೀವನದಲ್ಲಿ ಎದುರಿಸಿದ ದೊಡ್ಡ ಸವಾಲೆಂದರೆ ಭಾರತೀಯ ಮಹಿಳೆಯರು ಅಂತಾರಾಷ್ಟ್ರೀಯ ಟೆನ್ನಿಸ್‌ನಲ್ಲಿ ಮಿಂಚಬಹುದು ಎಂಬುದನ್ನು ನನ್ನ ದೇಶಕ್ಕೆ ಮತ್ತು ಪ್ರಪಂಚದ ಇತರ ದೇಶಗಳಿಗೆ ಸಾಬೀತುಪಡಿಸುವುದಾಗಿತ್ತು. ಮತ್ತು ನಾನು ಅದರಲ್ಲಿ ಯಶಸ್ವಿಯಾಗಿ ಹೊರಹೊಮ್ಮಿದ್ದಕ್ಕೆ ತುಂಬಾ ಸಂತೋಷವಾಗಿದೆ " ಎಂದು ಹಲವು ಪ್ರಶಸ್ತಿ, ವಿವಾದದ ಜೊತೆಗೆ ಡಬಲ್ಸ್ನಲ್ಲಿ ನಂಬರ್ 1 ಶ್ರೇಯಾಂಕಕ್ಕೇರಿದ ಏಕೈಕ ಮಹಿಳಾ ಆಟಗಾರ್ತಿ ಮಿರ್ಜಾ ಹೇಳಿದ್ದಾರೆ.
ಕಳೆದ ಒಂದೆರಡು ದಶಕಗಳಿಂದ ಪ್ರತಿದಿನ ತರಬೇತಿ ಪಡೆಯಲು ತಮ್ಮನ್ನು ಪ್ರೇರೇಪಿಸಿದ ಅಂಶದ ಬಗ್ಗೆ ಕೇಳಿದ್ದಕ್ಕೆ, ನಾನು ಕ್ರೀಡೆಯನ್ನು ಪ್ರೀತಿಸುತ್ತೇನೆ. ಟೆನ್ನಿಸ್ ನನ್ನ ಪ್ರೇರಕ ಶಕ್ತಿ. ಗಾಯಗಳು, ಸರ್ಜರಿಗಳು ನನಗೆ ಯಾವುದೇ ಸಮಸ್ಯೆಯಲ್ಲ, ಕ್ರೀಡೆಯ ಮೇಲಿನ ನನ್ನ ಆಸಕ್ತಿಯೇ ಇಷ್ಟು ವರ್ಷಗಳ ಕಾಲ ನನ್ನನ್ನು ಕರೆದುಕೊಂಡು ಬಂದಿದೆ. ನನ್ನ ದೇಶಕ್ಕಾಗಿ ಈ ಕ್ರೀಡೆಯಲ್ಲಿ ಉತ್ಕೃಷ್ಟರಾಗಿರಬೇಕೆಂಬ ಹಂಬಲ ನನ್ನನ್ನು ಕಷ್ಟಪಟ್ಟು ಕೆಲಸ ಮಾಡಲು ಪ್ರೇರೇಪಿಸಿತು" ಎಂದು ಹೈದರಾಬಾದ್ ಬೆಡಗಿ ಹೇಳಿದ್ದಾರೆ.
ಕೋಚ್ ಅಥವಾ ಕಮೆಂಟೇಟರ್ ಆಗಿ ಮುಂದುವರಿಯಲಿದ್ದೇನೆ..ನಿವೃತ್ತಿಯ ನಂತರದ ಬಗ್ಗೆ ಮಾತನಾಡಿದ ಅವರು, ನಾನು ಪ್ರೀತಿಸುವ ಕ್ರೀಡೆಯನ್ನು ಬಿಟ್ಟು ದೂರ ಉಳಿಯಲು ನನ್ನಿಂದ ಸಾಧ್ಯವಿಲ್ಲ ಎಂದರು. ಕೋಚ್ ಅಥವಾ ಕಮೆಂಟೇಟರ್ ಆಗಿ ನೋಡಬಹುದೇ ಎಂದು ಕೇಳಿದ್ದಕ್ಕೆ, ಆಟಗಾರ್ತಿಯಾಗದಿದ್ದರೂ ಟೆ ಸ್ನೊಂದಿಗೆ ನನ್ನ ಉಪಸ್ಥಿತಿ ಮುಂದುವರಿಯಲಿದೆ. ನಾನು ಆರಾಧಿಸುವ ಕ್ರೀಡೆಯನ್ನು ಬಿಟ್ಟು ದೂರ ಇರಲಾರೆ" ಎಂದು ನಿವೃತ್ತಿ ನಂತರವೂ ತಾವು ಟೆನ್ನಿಸ್‌ನಲ್ಲಿ ಮುಂದುವರಿಯಲಿದ್ದೇನೆ ಎನ್ನುವುದನ್ನು 'ಈಟಿವಿ ಭಾರತ'ಕ್ಕೆ ಖಚಿತಪಡಿಸಿದ್ದಾರೆ.
ಸಾನಿಯಾ ಮಿರ್ಜಾ 2010ರಲ್ಲಿ ಪಾಕಿಸ್ತಾನ ಕ್ರಿಕೆಟರ್ ಶೋಯಬ್ ಮಲಿಕ್ ಅವರನ್ನು ವಿವಾಹವಾಗಿದ್ದಾರೆ. ಅವರಿಗೆ 2018ರಲ್ಲಿ ಇಶಾನ್ ಎಂಬ ಗಂಡು ಮಗು ಇದೆ. ವೃತ್ತಿ ಜೀವನ ಮತ್ತು ಪತ್ನಿ ಮತ್ತು ತಾಯಿ ಜವಾಬ್ದಾರಿ ಎರಡನ್ನೂ ಹೇಗೆ ನಿಭಾಯಿಸಿದಿರಿ ಎಂದು ಕೇಳಿದ್ದಕ್ಕೆ, ನಾನು ಒಂದು ಬಾರಿ ಗುರಿಯನ್ನು ನಿರ್ಧರಿಸಿಕೊಂಡರೆ, ಅದನ್ನು ಸಾಧಿಸುವವರೆಗೆ ಹಿಂತಿರುಗುವುದಿಲ್ಲ. ನನಗೆ ಪಿಲ್ಲರ್ ಆಗಿ ನನ್ನ ಕುಟುಂಬ ಸದಾ ಬೆಂಬಲಿಸಿದೆ ಎಂದು ತಮ್ಮ ಮಗ ಮತ್ತು ಕುಟುಂಬದ ಜೊತೆಗೆ ಹೆಚ್ಚಿನ ಸಮಯ ಕಳೆಯುವುದಕ್ಕೆ ನಿವೃತ್ತಿ ನಿರ್ಧಾರ ತೆಗೆದುಕೊಂಡಿರುವ ಮೂಗುತಿ ಸುಂದರಿ ತಿಳಿಸಿದ್ದಾರೆ.
35 ವರ್ಷದ ಸಾನಿಯಾ ಮಿರ್ಜಾ ಡಬಲ್ಸ್ ವಿಭಾಗದಲ್ಲಿ ಮೂರು ಗ್ರ್ಯಾಂಡ್ಸ್ಲಾಮ್, ಮಿಕ್ಸಡ್ ಡಬಲ್ಸ್ನಲ್ಲಿ ಮೂರು ಗ್ರ್ಯಾಂಡ್ಸ್ಸ್ಲಾಮ್ ಪ್ರಶಸ್ತಿ ಪಡೆದು ಭಾರತ ಮಹಿಳಾ ಟೆನ್ನಿಸ್ನ ದಂತಕತೆ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ:ಫೆಡರರ್, ಜೊಕೊವಿಕ್ ದಾಖಲೆ ಮುರಿದ ರಾಫೆಲ್: 21ನೇ ಗ್ರ್ಯಾಂಡ್ ಸ್ಲ್ಯಾಮ್ಗೆ ಮುತ್ತಿಕ್ಕಿದ ನಡಾಲ್