ಚೆನ್ನೈ:ಚೆಸ್ ವಿಶ್ವಕಪ್ ಪಂದ್ಯವು ಆರ್. ಪ್ರಜ್ಞಾನಂದ ಹಾಗೂ ಕಾರ್ಲ್ಸನ್ ನಡುವಿನ ತೀವ್ರ ಪೈಪೋಟಿಯಿಂದಾಗಿ ಮಂಗಳವಾರ ಹಾಗೂ ಬುಧವಾರ ಸತತ ಎರಡು ದಿನಗಳು ಡ್ರಾನಲ್ಲಿ ಅಂತ್ಯಕಂಡಿತ್ತು. ಹೀಗಾಗಿ ಗುರುವಾರ ಅಲ್ಪಾವಧಿಯ ಟೈ-ಬ್ರೇಕ್ ಪಂದ್ಯವನ್ನು ನಡೆಸಲಾಗಿತ್ತು. ಇದರಲ್ಲಿ 1.5-0.5 ಅಂತರದಿಂದ ಕಾರ್ಲ್ಸನ್ ಗೆಲುವು ಸಾಧಿಸಿದ್ದರು. ವೀರೋಚಿತ ಪ್ರರ್ದಶನದ ನಡುವೆಯೂ ರನ್ನರ್ಅಪ್ ಆಗಿದ್ದಾರೆ. ಫೈನಲ್ನಲ್ಲಿ ಸೋತರೂ ಕೂಡ 18 ವರ್ಷದ ಅತಿ ಕಿರಿಯ ವಯಸ್ಸಿಗೆ ಪ್ರಜ್ಞಾನಂದ ಮಾಡಿದ ಈ ಸಾಧನೆಯು ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಕೊನೆಯವರೆಗೂ ಹೋರಾಡಿದ ಪ್ರಜ್ಞಾನಂದ ಅವರನ್ನು ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಕೇಂದ್ರ ಸಚಿವ ಅನುರಾಗ್ ಠಾಕೂರ್, ಮಾಜಿ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಅಭಿನಂದಿಸಿದರು. ಅಲ್ಲದೇ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಮ್ಮ ಟ್ವಿಟರ್ ಪೋಸ್ಟ್‌ನಲ್ಲಿ, “ಚೆಸ್ ವಿಶ್ವದ 2 ಮತ್ತು 3 ನೇ ಶ್ರೇಯಾಂಕಿತ ಆಟಗಾರರನ್ನು ಸೋಲಿಸಿ 2023 ರ ವಿಶ್ವಕಪ್ ಫೈನಲ್‌ಗೆ ಮುನ್ನಡೆದಿದೆ. ನಿಮ್ಮ ಸಾಧನೆಯು ಭಾರತದ 1.4 ಶತಕೋಟಿ ಜನರ ರಾಷ್ಟ್ರೀಯ ಕನಸುಗಳೊಂದಿಗೆ ಅನುರಣಿಸುತ್ತದೆ. ಇಡೀ ದೇಶವೇ ನಿನ್ನ ಬಗ್ಗೆ ಹೆಮ್ಮೆಪಡುತ್ತದೆ ಪ್ರಜ್ಞಾನಂದ. ನಿಮ್ಮ ಈ ಆಟವು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುವ ಮೈಲಿಗಲ್ಲುಗಳಾಗಿ ಕಾರ್ಯನಿರ್ವಹಿಸುತ್ತದೆ ಎಂದು ಬರೆದುಕೊಂಡಿದ್ದಾರೆ.