ಹ್ಯಾಂಗ್ಝೌ (ಚೀನಾ): ಕಬಡ್ಡಿಯನ್ನು ಭಾರತ ಮಣ್ಣಿನ ಕ್ರೀಡೆ ಎಂದೇ ಕರೆಯಲಾಗುತ್ತದೆ. ಏಷ್ಯನ್ ಗೇಮ್ಸ್ನಲ್ಲಿ ದೇಶದ ಕಬಡ್ಡಿ ತಂಡ ಈ ಹಿಂದೆ ಸತತ ಪದಕಗಳನ್ನು ಗೆದ್ದು ಚಾಂಪಿಯನ್ ಆಗಿ ಮೆರೆದಿದೆ. ಆದರೆ 2018ರ ಆವೃತ್ತಿಯಲ್ಲಿ ಕಂಚಿನ ಪ್ರಶಸ್ತಿಗೆ ತೃಪ್ತಿ ಪಡಬೇಕಾಯಿತು. ಈ ಸಲ ಪುರುಷರ ತಂಡ ಸೆಮಿಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳನ್ನು ಮಣಿಸಿ ಫೈನಲ್ಗೆ ಲಗ್ಗೆ ಇಟ್ಟಿದೆ. ಈ ಮೂಲಕ ಕನಿಷ್ಟ ಬೆಳ್ಳಿ ಪದಕ ಪಕ್ಕಾ ಆಗಿದೆ.
1990 ರಿಂದ 2014ರ ವರೆಗೂ ಕಬಡ್ಡಿಯಲ್ಲಿ ಚಿನ್ನ ಕೈತಪ್ಪಿರಲಿಲ್ಲ. ಆದರೆ ಕಳೆದ ಆವೃತ್ತಿಯಲ್ಲಿ ತಂಡ ಎಡವಿತ್ತು. ಈ ಬಾರಿ ಅದ್ಭುತ ಪ್ರದರ್ಶನ ನೀಡಿ ಫೈನಲ್ಗೇರಿದೆ. ಲೀಗ್ ಹಂತದ ನಾಲ್ಕು ಪಂದ್ಯಗಳನ್ನು ದೊಡ್ಡ ಅಂತರದ ಫಲಿತಾಂಶದೊಂದಿಗೆ ಜಯಿಸಿದೆ. ಸೆಮಿಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ 61-14ರ ಅಂತರದ ಜಯ ದಾಖಲಿಸಿ ಫೈನಲ್ಗೆ ಅಡಿಯಿಟ್ಟಿದೆ. ಹೀಗಾಗಿ ಮತ್ತೆ ಸ್ವರ್ಣ ಪದಕ ಗೆಲ್ಲುವ ಎಲ್ಲಾ ನಿರೀಕ್ಷೆಗಳಿವೆ.
ಪಾಕ್ ವಿರುದ್ಧ ಭರ್ಜರಿ ಗೆಲುವು:ಇಂದು (ಶುಕ್ರವಾರ) ನಡೆದ ಸೆಮಿಫೈನಲ್‌ನಲ್ಲಿ ಭಾರತ ತಂಡ ಪಾಕ್ ವಿರುದ್ಧ 61-14 ಅಂಕಗಳಿಂದ ಗೆದ್ದು ಬೀಗಿತು. ಈ ಗೆಲುವಿನೊಂದಿಗೆ ಭಾರತ ಪುರುಷರು ಏಷ್ಯನ್ ಗೇಮ್ಸ್ ಕಬಡ್ಡಿಯಲ್ಲಿ ಎಂಟನೇ ಬಾರಿಗೆ ಫೈನಲ್ ಪ್ರವೇಶಿಸಿದಂತಾಗಿದೆ. 1990ರ ನಂತರ 7 ಚಿನ್ನ ಗೆದ್ದ ತಂಡ 8ನೇ ಸ್ವರ್ಣ ಪದಕಕ್ಕೆ ಹೊಂಚುಹಾಕಿದೆ.
ಸೆಮಿಸ್ ಆರಂಭದಲ್ಲಿ ಪಾಕಿಸ್ತಾನ 0-4 ರಿಂದ ಮುನ್ನಡೆ ಪಡೆದುಕೊಂಡಿತು. ಎರಡು ಟ್ಯಾಕಲ್ ಅಂಕ ಮತ್ತು ಎರಡು ರೈಡ್ ಪಾಯಿಂಟ್ಗಳು ಪಾಕ್ ಪಾಲಾಗಿದ್ದವು. ಈ ನಷ್ಟದಿಂದ ಭಾರತ ವೇಗವಾಗಿ ಚೇತರಿಸಿಕೊಂಡಿತು. ಒಮ್ಮೆಗೆ 10 ಪಾಯಿಂಟ್ಗೆ ಜಿಗಿತ ಕಂಡಿತ್ತು. ನವೀನ್ ಕುಮಾರ್ ಅವರ ಮಲ್ಟಿ-ಪಾಯಿಂಟ್ ರೈಡ್ ಭಾರತಕ್ಕೆ ಬಲ ನೀಡಿತು. ನವೀನ್ ಎಂಟು ರೈಡ್ ಪಾಯಿಂಟ್ನಿಂದ ಪಾಕಿಸ್ತಾನ ಆಲ್‌ಔಟ್ ಆಯಿತು. ಭಾರತ ರೈಡರ್ಗಳು ಪಾಕ್ನ ಟ್ಯಾಕಲ್ಗೆ ಸಿಗಲೇ ಇಲ್ಲ. ಪವನ್ ಸೆಹ್ರಾವತ್ ಮತ್ತು ನವೀನ್ ಕುಮಾರ್ ಮಲ್ಟಿ-ಪಾಯಿಂಟ್ ರೈಡ್ ಪಾಕ್ ಅನ್ನು ಮತ್ತೆ ಆಲ್ಔಟ್ಗೆ ತಳ್ಳಿತು. ಮೊದಲಾರ್ಧದ ಅಂತ್ಯದಲ್ಲಿ ಪಾಕಿಸ್ತಾನ 30-5ರ ಭಾರಿ ಹಿನ್ನಡೆ ಪಡೆದುಕೊಂಡಿತು.
ದ್ವಿತೀಯಾರ್ಧದಲ್ಲಿ ಪವನ್ ಸೆಹ್ರಾವತ್ ಮತ್ತು ನವೀನ್ ಕುಮಾರ್ ಬದಲಿಗೆ ಸಚಿನ್ ತನ್ವಾರ್ ಮತ್ತು ಆಕಾಶ್ ಶಿಂಧೆ ಪಾಕ್ನ ಬಲ ಮುರಿದರು. ದ್ವಿತೀಯಾರ್ಧದ ಆರಂಭದಲ್ಲಿ ಪಾಕ್ ತನ್ನ ಆಟವನ್ನು ಒಂದು ಹಂತದಿಂದ ಸುಧಾರಿಸುವಲ್ಲಿ ಯಶಸ್ವಿಯಾಯಿತು. ಆದರೂ, ಭಾರತವು ತುಂಬಾ ಪ್ರಬಲವಾಗಿದೆ ಎಂದು ಸಾಬೀತುಪಡಿಸಿತು. ಎರಡು ಬಾರಿ ಬೆಳ್ಳಿ ವಿಜೇತ ಪಾಕಿಸ್ತಾನವನ್ನು ಎರಡು ಬಾರಿ ಆಲ್‌ಔಟ್ ಮಾಡಿ, ಪಂದ್ಯದ ಸಮಯದ ಮುಕ್ತಾಯಕ್ಕೆ 61-14ರ ಸುಲಭ ಜಯದಿಂದ ಭಾರತ ಫೈನಲ್ ಪ್ರವೇಶಿಸಿತು.
ನಾಳೆ ಪುರುಷರ ಮತ್ತು ಮಹಿಳೆಯರ ತಂಡ ಫೈನಲ್ನಲ್ಲಿ ಮೈದಾನಕ್ಕಿಳಿಯಲಿದೆ. ಪುರುಷರ ತಂಡ ಭಾರತೀಯ ಕಾಲಮಾನ ಮಧ್ಯಾಹ್ನ 12:30ಕ್ಕೆ ಪಂದ್ಯವಾಡಿದರೆ, ವನಿತೆಯರ ತಂಡ ಬೆಳಗ್ಗೆ 7:00 (ಭಾ.ಕಾ) ಆಡಲಿದೆ.
ಇದನ್ನೂ ಓದಿ:ಏಷ್ಯನ್ ಗೇಮ್ಸ್: ಬಿಲ್ಲು ಸ್ಪರ್ಧೆಯಲ್ಲಿ ಬೆಳ್ಳಿ; ಬ್ಯಾಡ್ಮಿಂಟನ್, ಕುಸ್ತಿ, ಕಿಕ್ ವಾಲಿಬಾಲ್ನಲ್ಲಿ ಕಂಚು