ಗೋವಾ: ಬೆಂಗಳೂರು ಎಫ್ಸಿ ತಂಡ ಮಂಗಳವಾರ ಗೋವಾದ ಫತೋರ್ಡಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನಾರ್ತ್‌ಈಸ್ಟ್ ಯುನೈಟೆಡ್ ವಿರುದ್ಧ ಡ್ರಾ ಸಾಧಿಸುವ ಮೂಲಕ ಅಂಕಗಳನ್ನು ಹಂಚಿಕೊಂಡಿದೆ.
ಆಟ ಆರಂಭವಾದ 4ನೇ ನಿಮಿಷದಲ್ಲೆ ನಾರ್ತ್‌ಈಸ್ಟ್ ಅಚ್ಚರಿಯ ಗೋಲುಗಳಿಸಿ ಮುನ್ನಡೆ ಪಡೆದುಕೊಂಡಿತು. ಲೂಯಿಸ್ ಮಚಾಡೋ ಗೋಲು ಸಿಡಿಸಿ ಮುನ್ನಡೆ ದೊರೆಕಿಸಿಕೊಟ್ಟಿದ್ದರು. ಆದರೆ ಬೆಂಗಳೂರು ತಂಡದ ಜುವಾನನ್ 13ನೇ ನಿಮಿಷದಲ್ಲೇ ಗೋಲು ಸಿಡಿಸುವ ಮೂಲಕ 1-1 ಸಮಬಲ ಸಾಧಿಸುವಂತೆ ನೆರವಾದರು.
ಬೆಂಗಳೂರು ತಂಡದಲ್ಲಿ ಸನ್ಸ್ಟಿಟ್ಯೂಟ್ ಆಗಿ ಮೈದಾನಕ್ಕಿಳಿದಿದ್ದ ಉದಾಂತ ಸಿಂಗ್ 70ನೇ ನಿಮಿಷದಲ್ಲಿ ಗೋಲು ಸಿಡಿಸಿ ಬೆಂಗಳೂರು ತಂಡಕ್ಕೆ ಮುನ್ನಡೆ ದೊರಕಿಸಿಕೊಟ್ಟರು. ಆದರೆ ಈ ಸಂಭ್ರಮ ಹೆಚ್ಚು ಹೊತ್ತು ಉಳಿಯಲಿಲ್ಲ. ಮಚಾಡೋ 2ನೇ ಗೋಲು ಸಿಡಿಸಿ 2-2 ರಲ್ಲಿ ಸಮಬಲಕ್ಕೆ ತಂದರು. ಉಳಿದ ಸಮಯದಲ್ಲಿ ಎರಡು ತಂಡಗಳು ರಕ್ಷಣಾತ್ಮಕ ಆಟಕ್ಕೆ ಮುಂದಾಗಿದ್ದರಿಂದ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು.
5 ಪಂದ್ಯಗಳಲ್ಲಿ 2 ಜಯ 3 ಡ್ರಾ ಸಾಧಿಸಿರುವ ನಾರ್ತ್‌ಈಸ್ಟ್ 9 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಬೆಂಗಳೂರು ಎಫ್ಸಿ 4 ಪಂದ್ಯಗಳಲ್ಲಿ ಒಂದು ಗೆಲುವು ಹಾಗೂ 3 ಡ್ರಾ ಸಾಧಿಸಿ 6 ಅಂಕಗಳೊಂದಿಗೆ 4ನೇ ಸ್ಥಾನದಲ್ಲೇ ಮುಂದುವರಿದಿದೆ.