ಬ್ಯಾಂಬೊಲಿಮ್ (ಗೋವಾ): ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಟೂರ್ನಿಯಲ್ಲಿ ಮೊದಲ ಬಾರಿ ಫೈನಲ್ ತಲುಪುವ ಹಂಬಲದಲ್ಲಿರುವ ಮುಂಬೈ ಸಿಟಿ ಎಫ್‌ಸಿ ತಂಡವು ಎರಡನೇ ಲೀಗ್ನ ಸೆಮಿಫೈನಲ್‌ನಲ್ಲಿ ಆತಿಥೇಯ ಎಫ್‌ಸಿ ಗೋವಾ ತಂಡವನ್ನು ಇಂದು ಎದುರಿಸಲಿದೆ. ಉಭಯ ತಂಡಗಳ ನಡುವಿನ ಭರ್ಜರಿ ಹಣಾಹಣಿಗೆ ಜಿಎಂಸಿ ಕ್ರೀಡಾಂಗಣ ಸಜ್ಜುಗೊಂಡಿದೆ.
ಏಳು ಆವೃತ್ತಿಗಳಲ್ಲಿ ಇಲ್ಲಿಯವರೆಗೂ ಮುಂಬೈ ಸಿಟಿ ಎಫ್‌ಸಿ ತಂಡವು ಒಮ್ಮೆಯೂ ಪ್ರಶಸ್ತಿ ಸುತ್ತು ತಲುಪಿಲ್ಲ. ಈ ಬಾರಿ ಲೀಗ್ ವಿಜೇತರು ಎಂಬ ಹಿರಿಮೆ ತನ್ನದಾಗಿಸಿಕೊಂಡಿರುವ ಮುಂಬೈ, ಮತ್ತೊಂದು ಮಹತ್ವದ ಸಾಧನೆಯ ಮೇಲೆ ಕಣ್ಣಿಟ್ಟಿದೆ.
ಉಭಯ ತಂಡಗಳ ನಡುವೆ ನಡೆದ ಮೊದಲ ಲೆಗ್ ಸೆಮಿಫೈನಲ್ ಪಂದ್ಯ 2-2 ರಿಂದ ಡ್ರಾನಲ್ಲಿ ಅಂತ್ಯಗೊಂಡಿತ್ತು. ಆದರೆ, ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮುಂಬೈ ತಂಡ ಈ ಪಂದ್ಯದಲ್ಲಿ ನಿರೀಕ್ಷೆಗೆ ತಕ್ಕ ಆಟವಾಡಿರಲಿಲ್ಲ. ಬಹುತೇಕ ಪಂದ್ಯದಲ್ಲಿ ಗೋವಾ ತಂಡವೇ ಪಾರು ಪತ್ಯ ಮೆರೆದಿತ್ತು.