ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಂಡದ ಸ್ಟ್ಯಾಂಡ್‌ಬೈ ಆಟಗಾರನಾಗಿ ಆಯ್ಕೆಯಾಗಿದ್ದ ರುತುರಾಜ್ ಗಾಯಕ್ವಾಡ್ ಅವರ ಬದಲಿಗೆ ಉದಯೋನ್ಮುಖ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಅವರನ್ನು ಲಂಡನ್‌ಗೆ ಕಳುಹಿಸಲಾಗುತ್ತದೆ ಎಂದು ವರದಿಯಾಗಿದೆ. ಸ್ಟ್ಯಾಂಡ್‌ಬೈ ಆಟಗಾರರಾಗಿರುವ ರುತುರಾಜ್ ಗಾಯಕ್ವಾಡ್ ಜೂನ್ 3 ರಂದು ವಿವಾಹವಾಗಲಿರುವ ಕಾರಣ ಈ ಬದಲಾವಣೆ ಮಾಡಲಾಗಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ. ಆದರೆ ಬಿಸಿಸಿಐ ಈ ಬಗ್ಗೆ ಮಾಹಿತಿ ನೀಡಿಲ್ಲ.
ಐಪಿಎಲ್ ಮುಗಿಯುತ್ತಿದ್ದಂತೆ ಒಂಬತ್ತು ದಿನಗಳ ಬಿಡುವಿನ ನಂತರ ಐಸಿಸಿ ನಡೆಸುತ್ತಿರುವ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯ ನಡೆಯಲಿದೆ. ಇದರಲ್ಲಿ ಭಾರತ ತಂಡ ಇಂಗ್ಲೆಂಡ್ನ ಓವೆಲ್ ಮೈದಾನದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಬೇಕಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಜೂನ್ 7 ರಿಂದ ಜೂನ್ 11ರ ವರೆಗೆ ನಡೆಯಲಿದೆ. ಮಳೆ ಬಂದಲ್ಲಿ ಪಂದ್ಯದ ಫಲಿತಾಂಶಕ್ಕಾಗಿ 12 ನೇ ತಾರೀಕು ಮೀಸಲು ದಿನವಾಗಿದೆ.
ಡಬ್ಲ್ಯೂಟಿಸಿ ಪಂದ್ಯಕ್ಕಾಗಿ ಈಗಾಗಲೇ ಒಂದು ಗುಂಪು ಲಂಡನ್ ಪ್ರವಾಸ ಬೆಳೆಸಿದ್ದು, ಅಭ್ಯಾಸದಲ್ಲಿ ತೊಡಗಿಕೊಂಡಿದೆ. ಐಪಿಎಲ್ ಫೈನಲ್ ಪಂದ್ಯದಲ್ಲಿ ಅಜಿಂಕ್ಯಾ ರಹಾನೆ, ಶುಭಮನ್ ಗಿಲ್, ಕೆ.ಎಸ್. ಭರತ್, ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಶಮಿ ಭಾಗವಹಿಸಲಿದ್ದಾರೆ. ಇವರು ಲಂಡನ್‌ಗೆ ಕೊನೆಯವರಾಗಿ ಪ್ರಯಾಣ ಬೆಳೆಸಲಿದ್ದಾರೆ.
ರುತುರಾಜ್ ಗಾಯಕ್ವಾಡ್ ಜೂನ್ 3 ರಂದು ವಿವಾಹವಾಗಲಿರುವ ಕಾರಣ ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ಗೆ ಸ್ಟ್ಯಾಂಡ್‌ಬೈ ಆಟಗಾರನಾಗಿ ಯಶಸ್ವಿ ಜೈಸ್ವಾಲ್ ಅವರನ್ನು ಭಾರತೀಯ ತಂಡಕ್ಕೆ ಸೇರಿಸಲಾಗಿದೆ. ತಮ್ಮ ಮದುವೆಯ ವೇಳಾಪಟ್ಟಿಯನ್ನು ಮೊದಲೇ ತಿಳಿಸಿದ್ದ ಗಾಯಕ್ವಾಡ್ ಜೂನ್ 5 ರ ನಂತರ ತಂಡವನ್ನು ಸೇರುವುದಾಗಿ ತಿಳಿಸಿದ್ದರಂತೆ. ಅವರ ಅನುಪಸ್ಥಿತಿಯಲ್ಲಿ, ಯುಕೆ ವೀಸಾವನ್ನು ಜೈಸ್ವಾಲ್‌ಗೆ ನೀಡಲಾಗಿದೆ.