ಮುಂಬೈ: ಇಲ್ಲಿನ ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ಭಾನುವಾರ ರಾತ್ರಿ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನ (ಡಬ್ಲ್ಯುಪಿಎಲ್-2023) ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವು ಗುಜರಾತ್ ಜೈಂಟ್ಸ್ ಅನ್ನು 3 ವಿಕೆಟ್‌ಗಳಿಂದ ಸೋಲಿಸಿ ಗೆಲುವಿನ ನಗೆ ಬೀರಿತು. ತಂಡದ ಪರ ಗ್ರೇಸ್ ಹ್ಯಾರಿಸ್ 26 ಎಸೆತಗಳಲ್ಲಿ 59 ರನ್ ಗಳಿಸಿ ಅದ್ಭುತ ಆಟ ಪ್ರದರ್ಶಿಸಿದರು. ಜೊತೆಗೆ, ಕಿರಣ್ ನವಗಿರೆ ಕೂಡ 43 ಎಸೆತಗಳಲ್ಲಿ 53 ರನ್ ಗಳಿಸುವುದರೊಂದಿಗೆ ತಂಡದ ಗೆಲುವಿಗೆ ಕಾರಣರಾದರು.
170 ರನ್ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್ ಪವರ್‌ಪ್ಲೇನಲ್ಲಿ 35 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡರೂ ದಿಟ್ಟವಾಗಿ ಹೋರಾಡಿತ್ತು. ಗುಜರಾತ್ ಪರ ಆರಂಭಿಕ ಆಟಗಾರ್ತಿ ಎಸ್.ಮೇಘನಾ 24 ರನ್ ಗಳಿಸಿದರೆ, ಹರ್ಲೀನ್ ಡಿಯೋಲ್ 46 ರನ್ ಪಡೆದು ಉತ್ತಮ ಇನ್ನಿಂಗ್ಸ್ ಆಡಿದರು. ಪ್ರಸಕ್ತ ಸಾಲಿನ ಟಿ20 ಲೀಗ್‌ನಲ್ಲಿ ಗುಜರಾತ್ ಸತತ ಎರಡನೇ ಬಾರಿಗೆ ಸೋಲು ಅನುಭವಿಸಿತು. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 143 ರನ್‌ಗಳ ಭಾರಿ ಅಂತರದಿಂದ ಸೋಲುಂಡಿತ್ತು.
ಇದನ್ನೂ ಓದಿ:WPL 2023: ಮೊದಲ ಪಂದ್ಯದಲ್ಲಿ ಎಡವಿದ ಆರ್ಸಿಬಿ, ಡೆಲ್ಲಿ ಬೃಹತ್ ಮೊತ್ತದ ದಾಖಲೆ
ಕಿರಣ್ ನವಗಿರೆ ಬಹಳ ಎಚ್ಚರಿಕೆ ಆಟ ಮುಂದುವರೆಸುವ ಮೂಲಕ ಇನ್ನಿಂಗ್ಸ್‌ಗೆ ಸ್ವಲ್ಪ ಉತ್ತೇಜನ ನೀಡಿದರು. ದೀಪ್ತಿ ಶರ್ಮಾ ಅವರೊಂದಿಗೆ ಸ್ಥಿರತೆ ಕಾಯ್ದುಕೊಂಡು 40 ಎಸೆತಗಳಲ್ಲಿ 50 ರನ್ ಕಲೆ ಹಾಕಿದರು. ಮುಂಬೈ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಗುಜರಾತ್ ನಾಯಕಿ ಬೆತ್ ಮೂನಿ ಗಾಯಗೊಂಡಿದ್ದರು. ಹೀಗಾಗಿ, ಮೂನಿ ಅನುಪಸ್ಥಿತಿಯಲ್ಲಿ ಸ್ನೇಹ ರಾಣಾ ಗುಜರಾತ್ ಜೈಂಟ್ಸ್ ನಾಯಕತ್ವ ವಹಿಸಿಕೊಂಡಿದ್ದರು.