ಹೈದರಾಬಾದ್: ವಿಶ್ವಕಪ್ ಕ್ರಿಕೆಟ್‌ನಲ್ಲಿ ಕಳಪೆ ಪ್ರದರ್ಶನದಿಂದ ಕಂಗೆಟ್ಟಿರುವ ಇಂಗ್ಲೆಂಡ್ ತಂಡಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. ತಂಡದ ಸ್ಟಾರ್ ಅನುಭವಿ ವೇಗಿ ರೀಸ್ ಟೋಪ್ಲಿ ಗಾಯಗೊಂಡು ಐಸಿಸಿ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಆಂಗ್ಲರ 15 ಸದಸ್ಯರ ಬಳಗಕ್ಕೆ ಅನನುಭವಿ ವೇಗಿ ಬ್ರೈಡನ್ ಕಾರ್ಸೆ ಅವರನ್ನು ಸೇರಿಸಿಕೊಳ್ಳಲಾಗಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸೋಮವಾರ ಈ ಕುರಿತು ಮಾಹಿತಿ ನೀಡಿದೆ.
ಶನಿವಾರ ಮುಂಬೈನ ವಾಂಖೆಡೆಯಲ್ಲಿ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದ ವೇಳೆ ರೀಸ್ ಟೋಪ್ಲಿ ಎಡಗೈ ತೋರು ಬೆರಳಿನ ಗಾಯಕ್ಕೆ ತುತ್ತಾಗಿದ್ದರು. ಇದರಿಂದಾಗಿ ಅವರು ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ಗೂ ಬಂದಿರಲಿಲ್ಲ. ತೋರು ಬೆರಳಿನ ಮೂಳೆಗೆ ಗಾಯವಾಗಿರುವುದರಿಂದ ಅವರು ವಿಶ್ವಕಪ್ನಿಂದ ಹೊರಗುಳಿದಿದ್ದಾರೆ. ಇಂಗ್ಲೆಂಡ್ ತನ್ನ ತಂಡದಲ್ಲಿ ಜೋಫ್ರಾ ಆರ್ಚರ್ ಅವರನ್ನು ವಿಶ್ವಕಪ್ನ ಪ್ರವಾಸಕ್ಕೆ ಮೀಸಲು ಆಟಗಾರ ಎಂದು ಘೋಷಿಸಿತ್ತು. ಆದರೆ ಆರ್ಚರ್ ಸಂಪೂರ್ಣ ಫಿಟ್ ಆಗಿರದ ಕಾರಣ ತಂಡಕ್ಕೆ ಸೇರಿಸಿಕೊಂಡಿಲ್ಲ. ಬ್ರೈಡನ್ ಕಾರ್ಸ್‌ಗೆ ತಂಡದಲ್ಲಿ ಮಣೆ ಹಾಕಲಾಗಿದೆ.
ಬ್ರೈಡನ್ ಕಾರ್ಸ್ ಇಂಗ್ಲೆಂಡ್ ತಂಡಕ್ಕಾಗಿ 12 ಏಕದಿನ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಜುಲೈನಲ್ಲಿ ಪಾಕಿಸ್ತಾನದ ತಂಡ ಇಂಗ್ಲೆಂಡ್ಗೆ ಪ್ರವಾಸ ಮಾಡಿತ್ತು. ಈ ವೇಳೆ ಬ್ರೈಡನ್ ಪಾದಾರ್ಪಣೆ ಮಾಡಿದ್ದರು. ಪಾಕ್ ವಿರುದ್ಧ ಐದು ವಿಕೆಟ್ ಉರುಳಿಸಿದ್ದು ಮತ್ತು ನೆದರ್ಲೆಂಡ್, ನ್ಯೂಜಿಲೆಂಡ್ ವಿರುದ್ಧ ಗಮನಾರ್ಹ ಪ್ರದರ್ಶನ ನೀಡಿದ್ದೇ ವಿಶ್ವಕಪ್ಗೆ ಅವರ ಆಯ್ಕೆಗೆ ಕಾರಣ. 12 ಏಕದಿನದಲ್ಲಿ 11 ಇನ್ನಿಂಗ್ಸ್ ಆಡಿರುವ ಬ್ರೈಡನ್ 5.75ರ ಎಕಾನಮಿ ದರದಲ್ಲಿ 14 ವಿಕೆಟ್ ಪಡೆದಿದ್ದಾರೆ.
ಇಂಗ್ಲೆಂಡ್ ತನ್ನ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸೋತು ಅಂಕಪಟ್ಟಿಯುಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ. ಐದನೇ ಪಂದ್ಯವನ್ನು ಆಂಗ್ಲರು ಅ.26 ಗುರುವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ಆಡಲಿದ್ದಾರೆ. ಈ ಪಂದ್ಯದ ವೇಳೆಗೆ ಬ್ರೈಡನ್ ಕಾರ್ಸೆ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ. ಪ್ಲೇ ಆಫ್ ಸ್ಥಾನಕ್ಕೆ ಪ್ರವೇಶ ಪಡೆಯಲು ಇಂಗ್ಲೆಂಡ್ಗೆ ಈ ಪಂದ್ಯವನ್ನು ಗೆಲ್ಲುವುದು ಅನಿವಾರ್ಯ. ಅ. 29 ರಂದು ಭಾನುವಾರ ಭಾರತವನ್ನು ಲಖನೌ ಮೈದಾನದಲ್ಲಿ ಇಂಗ್ಲೆಂಡ್ ಎದುರಿಸಲಿದೆ. ಇಂಗ್ಲೆಂಡ್ ನ. 4 ಆಸ್ಟ್ರೇಲಿಯಾ, ನ.8 ನೆದರ್ಲೆಂಡ್ ಮತ್ತು ನ. 11 ಪಾಕಿಸ್ತಾನವನ್ನು ಎದುರಿಸಲಿದೆ. ಇದರಲ್ಲಿ ಭಾರತ, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ಪ್ರಬಲ ಮುಖಾಮುಖಿ ಆಗಿರಲಿದೆ.
ಇದನ್ನೂ ಓದಿ:ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಸ್ಪಿನ್ ದಂತಕಥೆ ಬಿಷನ್ ಸಿಂಗ್ ಬೇಡಿ ನಿಧನ