ಕರ್ನಾಟಕ

karnataka

ETV Bharat / sports

ತಡವಾಗಿ ಮೈದಾನಕ್ಕಿಳಿದ ಏಂಜೆಲೊ ಮ್ಯಾಥ್ಯೂಸ್ ಔಟ್​.. ಏನಿದು ಟೈಮ್​ ಔಟ್​ ನೀತಿ?

Angelo Mathews timed out in international cricket: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್ 2023 ರಲ್ಲಿ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ಆಲ್‌ರೌಂಡರ್ ಏಂಜೆಲೊ ಮ್ಯಾಥ್ಯೂಸ್ ಮೈದಾನಕ್ಕೆ ತಡವಾಗಿ ಬಂದ ಕಾರಣಕ್ಕೆ ಔಟ್​ ಎಂದು ಪ್ರಕಟಿಸಲಾಗಿದೆ.

Angelo Mathews
Angelo Mathews

By ETV Bharat Karnataka Team

Published : Nov 6, 2023, 5:44 PM IST

ನವದೆಹಲಿ: ಮೈದಾನಕ್ಕೆ ಸಮಯ ಮೀರಿ ಆಗಮಿಸಿದ ಶ್ರೀಲಂಕಾದ ಅನುಭವಿ ಆಲ್‌ರೌಂಡರ್ ಏಂಜೆಲೊ ಮ್ಯಾಥ್ಯೂಸ್ ಅವರನ್ನು ಅಂಪೈರ್​ ಔಟ್​ ಎಂದು ಪ್ರಕಟಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಧಿಕೃತವಾಗಿ ಸಮಯ ಮೀರಿದೆ ಎಂದು ಘೋಷಿಸಿದ ಮೊದಲ ಆಟಗಾರ ಏಂಜೆಲೊ ಮ್ಯಾಥ್ಯೂಸ್ ಆಗಿದ್ದಾರೆ. ಪುರುಷ ಮತ್ತು ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಮ್ಯಾಥ್ಯೂಸ್ ಈ ರೀತಿಯಲ್ಲಿ ವಿಕೆಟ್​ ಕಳೆದುಕೊಂಡ ಆಟಗಾರ ಎಂಬ ಅಪಖ್ಯಾತಿಗೆ ಗುರಿಯಾಗಿದ್ದಾರೆ.

ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್ 2023 ರಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಅವರು ಈ ಅಪಖ್ಯಾತಿಗೆ ಒಳಗಾಗಿದ್ದಾರೆ. ಈ ಟೈಮ್​ ಔಟ್​ನಿಂದ ವಿಕೆಟ್​ ಕಳೆದುಕೊಂಡ ಪ್ರಕರಣ ಕ್ರಿಕೆಟ್​ನಲ್ಲಿ ಆರು ಬಾರಿ ಸಂಭವಿಸಿದೆ. ಆದರೆ, ಇದೆಲ್ಲವೂ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಗಿದೆ.

24.2ನೇ ಓವರ್​ನಲ್ಲಿ ಈ ಘಟನೆ ನಡೆದಿದೆ. ಬಾಂಗ್ಲಾ ನಾಯಕ ಶಕೀಬ್​ ಅಲ್​ ಹಸನ್​ ಬೌಲಿಂಗ್​ ಮಾಡುತ್ತಿದ್ದಾಗ 41 ರನ್​ ಗಳಿಸಿ ಆಡುತ್ತಿದ್ದ ಸದೀರ ಸಮರವಿಕ್ರಮ ವಿಕೆಟ್​ ಕಳೆದುಕೊಂಡರು. ಅವರ ನಂತರ 5ನೇ ಬ್ಯಾಟರ್​​ ಆಗಿ ಮ್ಯಾಥ್ಯೂಸ್ ಮೈದಾನಕ್ಕೆ ಬರಬೇಕಾಗಿತ್ತು. ಮೈದಾನಕ್ಕೆ ಬರಬೇಕಾದರೆ ಅವರ ಹೆಲ್ಮೆಟ್​ನ ಪಟ್ಟಿ ಸರಿಯಾಗಿ ಲಾಕ್​ ಆಗುತ್ತಿರಲಿಲ್ಲ. ಇದನ್ನು ಗಮನಿಸಿ ಮ್ಯಾಥ್ಯೂಸ್ ಬೇರೆ ಹೆಲ್ಮೆಟ್​ ತರಲು ಹೆಚ್ಚುವರಿ ಸಮಯ ಬೇಕೆಂದು ಕೇಳಿಕೊಂಡರು. ಶ್ರೀಲಂಕಾದ ಡಗೌಟ್‌ನಿಂದ ಅವರಿಗೆ ಬದಲಿ ಹೆಲ್ಮೆಟ್ ತಂದರು. ಆದರೆ, ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದರು. ಮೈದಾನದ ಅಂಪೈರ್‌ಗಳು ನಿಯಮಗಳ ಪ್ರಕಾರ ಅವರನ್ನು ಔಟ್ ಎಂದು ಘೋಷಿಸಿದರು.

ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ (MCC) ನಿಯಮದ ಪ್ರಕಾರ, "ಒಂದು ವಿಕೆಟ್ ಪತನದ ನಂತರ ಅಥವಾ ಬ್ಯಾಟರ್ ಹೊರನಡೆದ ನಂತರ, ಮೂರು ನಿಮಿಷದ ಒಳಗಾಗಿ ಹೊಸ ಆಟಗಾರ ಮೈದಾನಕ್ಕೆ ಬಂದು ಬಾಲ್​ ಎದುರಿಸಲು ಸಿದ್ಧರಾಗಬೇಕು. ಮೂರು ನಿಮಿಷಗಳೊಳಗಾಗಿ ಒಬ್ಬ ಬ್ಯಾಟರ್​ ಮೈದಾನಕ್ಕೆ ಬಂದು ಬಾಲ್​ ಎದುರಿಸಲು ಸಿದ್ಧರಾಗದೇ ಇದ್ದಲ್ಲಿ ಅವರನ್ನು ಔಟ್​ ಎಂದು ಅಂದರೆ ಟೈಮ್​ ಔಟ್​ ಎಂದು ಅಂಪೈರ್​ ನಿರ್ಧರಿಸುತ್ತಾರೆ" ಎಂದಿದೆ.

ಅದರಲ್ಲೂ 2023ರ ವಿಶ್ವಕಪ್​ಗೆ ಈ ಸಮಯವನ್ನು ಇನ್ನಷ್ಟು ಕಡಿಮೆ ಮಾಡಲಾಗಿದೆ. "ವಿಕೆಟ್ ಪತನದ ನಂತರ ಅಥವಾ ಬ್ಯಾಟರ್ ನಿವೃತ್ತಿಯ ನಂತರ ಬರುವ ಆಟಗಾರ ಎರಡು ನಿಮಿಷದ ಒಳಗಾಗಿ ಮೈದಾನಕ್ಕೆ ಬಂದು ಬ್ಯಾಟಿಂಗ್​ ಸಿದ್ಧರಾಗಿ ಬೌಲ್​ ಎದುರಿಸಬೇಕು ಎಂದಿದೆ. ಈ ವಿಶ್ವಕಪ್​ಗೆ ಎಮ್​ಸಿಸಿಯ ನಿಯಮಕ್ಕಿಂತ ಒಂದು ನಿಮಿಷವನ್ನು ಕಡಿತಗೊಳಿಸಲಾಗಿದೆ". ಬ್ಯಾಟರ್​ಗಳು ಸಮಯ ವ್ಯರ್ಥ ಮಾಡುವುದು ಕ್ಷೇತ್ರರಕ್ಷಣೆ ಮಾಡುತ್ತಿರುವ ತಂಡದ ದಂಡಕ್ಕೆ ಕಾರಣ ಆಗಬಹುದು. ನಿಧಾನಗತಿಯ ಬೌಲಿಂಗ್​ಗೆ ಐಸಿಸಿ ನಿಯಮದಂತೆ ಪಂದ್ಯದ ವೇತನದ ಶೇ.10ರಷ್ಟು ದಂಡ ವಿಧಿಸಲಾಗುತ್ತದೆ.

ದಿಗ್ಭ್ರಮೆಗೊಂಡ ಏಂಜೆಲೊ ಮ್ಯಾಥ್ಯೂಸ್ ಅಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಮತ್ತು ಶಕೀಬ್ ಅಲ್ ಹಸನ್ ಅವರ ಮನವಿಯನ್ನು ಹಿಂತೆಗೆದುಕೊಳ್ಳುವಂತೆ ಕೇಳಿಕೊಂಡರು. ಆದರೆ ಶಕೀಬ್ ಮನವಿಯನ್ನು ಹಿಂಪಡೆಯಲು ನಿರಾಕರಿಸಿದರು. ಮ್ಯಾಥ್ಯೂಸ್ ಅವರು ಡ್ರೆಸ್ಸಿಂಗ್ ಕೋಣೆಗೆ ಹಿಂತಿರುಗುತ್ತಿದ್ದಂತೆ ನಿರಾಶೆಯಿಂದ ಹೆಲ್ಮೆಟ್ ಅನ್ನು ಎಸೆದರು. ಶ್ರೀಲಂಕಾದ ನಾಯಕ ಕುಸಲ್ ಮೆಂಡಿಸ್ ಬಾಂಗ್ಲಾದೇಶದ ಕೋಚ್ ಮತ್ತು ಮಾಜಿ ಎಸ್‌ಎಲ್ ಆಟಗಾರ್ತಿ ಚಂಡಿಕಾ ಹತುರುಸಿಂಘೆ ಅವರೊಂದಿಗೆ ಘಟನೆಯ ಬಗ್ಗೆ ಮಾತನಾಡುತ್ತಿರುವುದು ಕಂಡುಬಂದಿದೆ.

ಇದನ್ನೂ ಓದಿ:ಸಚಿನ್​ ದಾಖಲೆ ಸರಿಗಟ್ಟುವ ಭಾರ ವಿರಾಟ್​ ಮೇಲಿತ್ತು, ಇನ್ನು ಒತ್ತಡ ರಹಿತರಾಗಿ ಆಡುತ್ತಾರೆ: ರಿಕಿ ಪಾಂಟಿಂಗ್​

ABOUT THE AUTHOR

...view details