ಮುಂಬೈ (ಮಹಾರಾಷ್ಟ್ರ):ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅವರ ಅಮೋಘ ಅರ್ಧ ಶತಕದ ನೆರವಿನಿಂದ ಭಾರತ ತಂಡವು ಶ್ರೀಲಂಕಾ ವಿರುದ್ಧದ ಇಂದಿನ ವಿಶ್ವಕಪ್ ಪಂದ್ಯದಲ್ಲಿ ಬೃಹತ್ ಮೊತ್ತ ಕಲೆ ಹಾಕಿದೆ. ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿದ ಟೀಂ ಇಂಡಿಯಾ, ಲಂಕಾ ಗೆಲುವಿಗೆ 358 ರನ್ ಗುರಿ ನೀಡಿದೆ. ಮುಂಬೈನ ವಾಂಖೆಡೆ ಮೈದಾನ ಇಂದಿನ ಬೃಹತ್ ಮೊತ್ತಕ್ಕೆ ಸಾಕ್ಷಿಯಾಯಿತು.
ಟಾಸ್ ಸೋತು ರನ್ಗಳ ಗೋಡೆ ಕಟ್ಟುವ ನಿರೀಕ್ಷೆಯಂತೆ ಬ್ಯಾಟಿಂಗ್ಗೆ ಇಳಿದ ಭಾರತ, ಆರಂಭದಲ್ಲಿಯೇ ಆಘಾತ ಎದುರಿಸಿತು. ಮೊದಲ ಓವರ್ನ ಮೊದಲ ಬಾಲ್ ಬೌಂಡರಿಗೆ ಅಟ್ಟಿದ ನಾಯಕ ರೋಹಿತ್ ಶರ್ಮಾ, ಎರಡನೇ ಬಾಲ್ಗೆ ತಮ್ಮ ವಿಕೆಟ್ ಒಪ್ಪಿಸಿ ಕ್ರೀಡಾಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು. ಲಂಕಾ ಬೌಲರ್ಗಳ ಮೇಲೆ ಹೀಗೆ ಸಲೀಸಾಗಿ ಸವಾರಿ ಮಾಡಬಹುದು ಎಂಬ ತಂಡದ ಖುಷಿ ಅರೆ ಕ್ಷಣದಲ್ಲಿ ಕಮರಿತು.
ಆದರೆ, ಅವರೊಂದಿಗೆ ಕಣಕ್ಕಿಳಿದಿದ್ದ ಶುಭ್‌ಮನ್ ಗಿಲ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ತಂಡದ ರನ್ ಹೆಚ್ಚಿಸುವಲ್ಲಿ ಸಫಲರಾದರು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಅವರೊಂದಿಗೆ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಸಿಕ್ಕ ಜೀವದಾನಗಳ ಲಾಭ ಪಡೆದ ಈ ಜೋಡಿ ಶ್ರೀಲಂಕಾ ಬೌಲರ್ಗಳನ್ನು ದಂಡಿಸಿದರು. ಅರ್ಧ ಶತಕ ಹಾಗೂ ಈ ಜೋಡಿಯ ಸೊಗಸಾದ ಆಟದ ನೆರವಿನಿಂದ 2ನೇ ವಿಕೆಟ್ಗೆ 179 ಎಸೆತಗಳಲ್ಲಿ ತಂಡಕ್ಕೆ 189 ರನ್ಗಳು ಹರಿದು ಬಂದವು.
92 ಎಸೆತ ಎದುರಿಸಿದ ಗಿಲ್, 2 ಸಿಕ್ಸ್ ಹಾಗೂ 11 ಬೌಂಡರಿಗಳ ಸಹಿತ 92 ರನ್ ಗಳಿಸಿ ಇನ್ನಿಂಗ್ಸ್ನ ಹೀರೋ ಆದರು. ಆದರೆ, ದಿಲ್ಶನ್ ಮಧುಶಂಕ ಎಸೆದ ಎಸೆತವನ್ನು ಬೌಂಡರಿಗೆ ಅಟ್ಟುವ ಚಾಣಕ್ಷತನಕ್ಕೆ ಕೈ ಹಾಕಿ ಶತಕದಿಂದ ವಂಚಿತರಾದರು. ಅವರೊಂದಿಗೆ ಎಂದಿನಂತೆ ಬ್ಯಾಟ್ ಬೀಸಿದ ರನ್ ಮಿಷನ್ ವಿರಾಟ್ ಕೊಹ್ಲಿ ಕೂಡ 88 ರನ್ ಗಳಿಸಿ ತಂಡಕ್ಕೆ ವರದಾನವಾದರು. 94 ಎಸೆತ ಎದುರಿಸಿದ ಕೊಹ್ಲಿ 11 ಬೌಂಡರಿಗಳೊಂದಿಗೆ 49ನೇ ಶತಕದ ಅಂಚಿನಲ್ಲಿ ಎಡವಿದರು.