ಹೈದರಾಬಾದ್:ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಕಳೆಪೆ ಪ್ರದರ್ಶನ ತೋರುತ್ತಿದ್ದು, ಆಡಿರುವ 6 ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದಿದ್ದು, ಮಿಕ್ಕ 5ರಲ್ಲಿ ಸೋಲು ಕಂಡು ಅಂಕಪಟ್ಟಿಯಲ್ಲಿ ಕೊನೆಯ ಹಂತ ತಲುಪಿದೆ. ಉಳಿದ 3 ಪಂದ್ಯದಲ್ಲಿ ಒಂದನ್ನು ಸೋತರೂ 2025ರಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆ ಆಗುವುದಿಲ್ಲ. ತಂಡದ ಇಂತಹ ಹೀನಾಯ ಸ್ಥಿತಿ ತಲುಪಿದ್ದನ್ನು ಕಂಡು ಇಂಗ್ಲೆಂಡ್‌ನ ಆಲ್‌ರೌಂಡರ್ ಡೇವಿಡ್ ವಿಲ್ಲಿ ಅವರು ಏಕದಿನ ವಿಶ್ವಕಪ್‌ನ ಕೊನೆಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವುದಾಗಿ ಇಂದು (ಬುಧವಾರ) ಘೋಷಿಸಿದ್ದಾರೆ.
ಡೇವಿಡ್ ವಿಲ್ಲಿ 2015ರಲ್ಲಿ ಇಂಗ್ಲೆಂಡ್‌ಗೆ ಪದಾರ್ಪಣೆ ಮಾಡಿದರು. ಅಂದಿನಿಂದ ಅವರು ತಂಡಕ್ಕಾಗಿ 70 ಏಕದಿನ ಮತ್ತು 43 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಏಕದಿನ ಸ್ವರೂಪದಲ್ಲಿ ವಿಲ್ಲಿ 30.3 ರ ಸರಾಸರಿಯಲ್ಲಿ 627 ರನ್ ಮತ್ತು 5.57ರ ಎಕಾನಮಿಯಲ್ಲಿ 94 ವಿಕೆಟ್ ಪಡೆದಿದ್ದಾರೆ. ಟಿ 20ಯಲ್ಲಿ 23.1 ರ ಸರಾಸರಿಯಿಂದ 226 ರನ್ ಕಲೆಹಾಕಿದ್ದು, 8.18 ಎಕಾನಮಿಯಲ್ಲಿ 51 ವಿಕೆಟ್‌ಗಳನ್ನು ಕಿತ್ತಿದ್ದಾರೆ.
ನಿವೃತ್ತಿಯ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ವಿಲ್ಲ, "ಈ ದಿನ ಬರಬೇಕು ಎಂದು ನಾನು ಎಂದಿಗೂ ಬಯಸಲಿಲ್ಲ. ಬಾಲ್ಯದಿಂದಲೂ ಇಂಗ್ಲೆಂಡ್ ಪರ ಕ್ರಿಕೆಟ್ ಆಡುವುದು ನನ್ನ ಕನಸಾಗಿತ್ತು. ನಾನು ಈ ಬಗ್ಗೆ ಸಾಕಷ್ಟು ಯೋಚಿಸಿದೆ ಮತ್ತು ಸಾಕಷ್ಟು ಚರ್ಚೆಯ ನಂತರ, ನಾನು ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲ ಸ್ವರೂಪಗಳಿಂದ ನಿವೃತ್ತಿ ಹೊಂದಲು ಹೊರಟಿದ್ದೇನೆ ಎಂದು ವಿಷಾದ ತಿಳಿಸುತ್ತಿದ್ದೇನೆ. ನಾನು ನಿವೃತ್ತಿ ಹೊಂದಲು ಇದು ಸರಿಯಾದ ಸಮಯ. ಐಸಿಸಿ ಏಕದಿನ ವಿಶ್ವಕಪ್ 2023ರ ನಂತರ ನಾನು ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವುದಿಲ್ಲ" ಎಂದು ಬರೆದುಕೊಂಡಿದ್ದಾರೆ.