ನವದೆಹಲಿ:ಭಾನುವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ವೀರೋಚಿತ ಗೆಲುವು ದಾಖಲಿಸಿತು. ಇದರೊಂದಿಗೆ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ 35ನೇ ಹುಟ್ಟುಹಬ್ಬದಂದೇ ಶತಕ ಸಿಡಿಸುವ ಮೂಲಕ ಮತ್ತೊಂದು ಮೈಲಿಗಲ್ಲು ತಲುಪಿದರು.
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಶತಕ ಗಳಿಸುವ ಮೂಲಕ ವಿರಾಟ್ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದರು. ವಿರಾಟ್ ತಾನಾಡಿರುವ 289 ಪಂದ್ಯಗಳಲ್ಲೇ 49 ಶತಕ ಗಳಿಸಿ ಸಾಧನೆ ಮಾಡಿದರೆ, ಸಚಿನ್ 463 ಪಂದ್ಯಗಳಲ್ಲಿ 49 ಶತಕ ಗಳಿಸಿದ್ದರು. ವಿರಾಟ್ ಕೇವಲ 289 ಪಂದ್ಯಗಳಲ್ಲೇ ಸಚಿನ್ ದಾಖಲೆಯನ್ನು ಸರಿಗಟ್ಟಿರುವುದು ಗಮನಾರ್ಹ.
'ವಿರಾಟ್' ಪ್ರದರ್ಶನಕ್ಕೆ ಭರಪೂರ ಅಭಿನಂದನೆ: ವಿರಾಟ್ ಶತಕದ ಸಾಧನೆಗೆ ಪ್ರಧಾನಿ ಮೋದಿ ಸೇರಿದಂತೆ ಭಾರತೀಯ ಕ್ರಿಕೆಟ್ ಆಟಗಾರರು, ದೇಶ, ವಿದೇಶಗಳ ಕ್ರೀಡಾತಾರೆಯವರು ಶುಭ ಕೋರಿದ್ದಾರೆ. ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಸುರೇಶ್ ರೈನಾ, ಯಜ್ವೇಂದ್ರ ಚಾಹಲ್, ಇರ್ಫಾನ್ ಪಠಾಣ್, ವೆಸ್ಟ್ ಇಂಡೀಸ್ ಆಟಗಾರ ಇಯಾನ್ ಬಿಶಪ್, ಪಾಕಿಸ್ತಾನ ವೇಗಿ ಮೊಹಮ್ಮದ್ ಅಮರ್ ಸೇರಿದಂತೆ ಹಲವು ಕ್ರಿಕೆಟ್ ದಿಗ್ಗಜರು ಶುಭ ಕೋರಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಭಾರತಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ನಮ್ಮ ಕ್ರಿಕೆಟ್ ತಂಡ ಮತ್ತೊಮ್ಮೆ ವಿಜಯಶಾಲಿಯಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಅಮೋಘ ಪ್ರದರ್ಶನ ನೀಡಿದ ತಂಡಕ್ಕೆ ಅಭಿನಂದನೆಗಳು. ಉತ್ತಮ ಇನ್ನಿಂಗ್ಸ್ ಆಡಿದ ವಿರಾಟ್ ಕೊಹ್ಲಿಗೆ ಹುಟ್ಟುಹಬ್ಬದ ಉಡುಗೊರೆಯನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸ್ಟಾರ್ ಬ್ಯಾಟರ್ ವೀರೇಂದ್ರ ಸೆಹ್ವಾಗ್, ಶ್ರೇಷ್ಠ ಆಟಗಾರನ ಏಕದಿನ ಶತಕವನ್ನು ಸರಿಗಟ್ಟಿದ ದಿನ. ಈಡನ್ ಗಾರ್ಡನ್ಸ್ನಲ್ಲಿ ಐತಿಹಾಸಿಕ ಜನ್ಮದಿನ. ಈ ಸಾಧನೆಗೆ ವಿರಾಟ್ಗೆ ಅಭಿನಂದನೆಗಳು ಎಂದು ಬರೆದಿದ್ದಾರೆ.
ಸ್ಟಾರ್ ಆಟಗಾರ ಸುರೇಶ್ ರೈನಾ ಅವರು, ಸೋ ಬ್ಯೂಟಿಫುಲ್.. ಸೋ ಎಲಿಗೆಂಟ್... ಜಸ್ಟ್ ಲುಕಿಂಗ್ ಲೈಕ್ ವ್ಹಾವ್ ಎಂದು ಬರೆದುಕೊಂಡಿದ್ದಾರೆ. ನಾನು ಮೊದಲ ಬಾರಿ ಭೇಟಿ ಮಾಡಿದಾಗ, ವಿರಾಟ್ ಪ್ರತಿ ಪಂದ್ಯದಲ್ಲೂ ಇಂದು ಶತಕವನ್ನು ಬಾರಿಸಬೇಕು ಎಂದು ಹೇಳುತ್ತಿದ್ದರು. ವೆಲ್ ಡನ್ ವಿರಾಟ್ ಎಂದು ಅಭಿನಂದಿಸಿದ್ದಾರೆ.
ಯಜ್ವೇಂದ್ರ ಚಾಹಲ್ ಪೋಸ್ಟ್ ಮಾಡಿ , ಕೊಹ್ಲಿ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಆಲ್‌ರೌಂಡರ್ ಇರ್ಫಾನ್ ಫಠಾಣ್ ಶುಭ ಕೋರಿದ್ದು, 2011ರ ವಿಶ್ವಕಪ್ನಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಭುಜದ ಮೇಲೆ ಹೊತ್ತುಕೊಂಡು ಹೋಗುವಲ್ಲಿಂದ ಇಂದು ಅವರ ದಾಖಲೆ ಸರಿಗಟ್ಟಿದ್ದಾರೆ. ಅಭಿನಂದನೆಗಳು ಚೇಸ್ ಮಾಸ್ಟರ್ ವಿರಾಟ್ ಎಂದು ಹೇಳಿದ್ದಾರೆ.
ವೆಸ್ಟ್ ಇಂಡೀಸ್ ತಂಡದ ಮಾಜಿ ಆಟಗಾರ ಇಯಾನ್ ಬಿಷಪ್, ವಿರಾಟ್ ಅವರು ಪರಂಪರೆಯನ್ನು ಭದ್ರಪಡಿಸಿದ್ದಾರೆ. 35ನೇ ಹುಟ್ಟುಹಬ್ಬದಂದು ವಿರಾಟ್ 49 ನೇ ಶತಕ ಗಳಿಸುವ ಮೂಲಕ ಕ್ರಿಕೆಟ್ ದಂತಕಥೆ ಸಚಿನ್ ಅವರ ಸಾಧನೆಯನ್ನು ಸರಿಗಟ್ಟಿದ್ದಾರೆ. ಇಬ್ಬರೂ ಶ್ರೇಷ್ಠ ಆಟಗಾರರು ಎಂದು ಬರೆದಿದ್ದಾರೆ. ಪಾಕಿಸ್ತಾನದ ವೇಗಿ ಮೊಹಮ್ಮದ್ ಅಮೀರ್ ಪ್ರತಿಕ್ರಿಯಿಸಿ, ವಿರಾಟ್ ಉತ್ತಮ ಇನ್ನಿಂಗ್ಸ್. ಶತಕ ಮತ್ತು ಹುಟ್ಟು ಹಬ್ಬ ಒಂದೇ ದಿನ. ನಿಮ್ಮ ದಿನವನ್ನು ಆನಂದಿಸಿ, ದೇವರು ನಿಮಗೆ ಆಶೀರ್ವದಿಸಲಿ ಎಂದು ಬರೆದಿದ್ದಾರೆ. ಪಾಕಿಸ್ತಾನದ ವೇಗಿ ಶೋಯಿಬ್ ಅಕ್ತರ್ ಕೂಡ ಅಭಿನಂದನೆ ಸಲ್ಲಿಸಿದ್ದಾರೆ.
ಭಾರತ-ದಕ್ಷಿಣ ಆಫ್ರಿಕಾ ಕ್ರಿಕೆಟ್ ಪಂದ್ಯ:ಭಾನುವಾರ ಈಡನ್ ಗಾರ್ಡನ್ಸ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿತ್ತು. ಆರಂಭಿಕ ಆಟಗಾರ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ರೋಹಿತ್ ಶರ್ಮಾ 23 ಎಸೆತದಲ್ಲಿ 40 ರನ್ ಗಳಿಸಿದರೆ, ಶುಭ್ಮನ್ ಗಿಲ್ 24 ಎಸೆತದಲ್ಲಿ 23 ರನ್ ಗಳಿಸಿ ಔಟಾದರು. ಇಬ್ಬರ ನಿರ್ಗಮನದ ಬಳಿಕ ಜೊತೆಯಾದ ವಿರಾಟ್ ಮತ್ತು ಶ್ರೇಯಸ್ ಅಯ್ಯರ್ ಉತ್ತಮ ಬ್ಯಾಟಿಂಗ್ ನಡೆಸಿದರು. ಶ್ರೇಯಸ್ 87 ಎಸೆತಗಳಲ್ಲಿ 77 ರನ್ ಗಳಿಸಿದರೆ, ವಿರಾಟ್ 101 ರನ್ ಪೇರಿಸಿದರು. ಸೂರ್ಯ ಕುಮಾರ್ ಯಾದವ್ 14 ಎಸೆತಗಳಲ್ಲಿ 22 ರನ್, ರವೀಂದ್ರ ಜಡೇಜಾ 15 ಎಸೆತಗಳಲ್ಲಿ 29 ರನ್ ಗಳಿಸುವ ಮೂಲಕ ಭಾರತ ತಂಡದ ಮೊತ್ತ 300 ದಾಟಲು ನೆರವಾದರು.ಈ ಮೂಲಕ ಭಾರತ 5 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿತು. ನಂತರ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಕೇವಲ 27 ಓವರ್ಗಳಲ್ಲಿ 83 ರನ್ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು 243 ರನ್ಗಳಿಂದ ಸೋಲನುಭವಿಸಿತು.
ಇದನ್ನೂ ಓದಿ:ದಾಖಲೆಯ ಶತಕ ಸಿಡಿಸಿ ಮೈದಾನದ ಸಿಬ್ಬಂದಿ ಜೊತೆ ವಿರಾಟ್ ಕೊಹ್ಲಿ ಫೋಟೋ- ವಿಡಿಯೋ