ಉನ್ನಾವೋ/ಫಿರೋಜಾಬಾದ್:ಐಸಿಸಿ ಅಂಡರ್ -19 ವಿಶ್ವಕಪ್. ಇಂಗ್ಲೆಂಡ್ ಆಟಗಾರ್ತಿ ಹೊಡೆದ ರಭಸಕ್ಕೆ ಚೆಂಡು ಮಿಡ್ ಆನ್ನತ್ತ ಹಾರಿ ಬಂತು. ಅಲ್ಲೇ ಇದ್ದ ಯುವ ಆಟಗಾರ್ತಿ ಚಂಗನೆ ಎಗರಿ ಕ್ಯಾಚ್ ಪಡೆದರು. ಆಗ ಇಡೀ ಮೈದಾನ ಒಂದು ಕ್ಷಣ ಅವಾಕ್ಕಾಯಿತು. ಸ್ವತಃ ಇಂಗ್ಲೆಂಡ್ ಆಟಗಾರ್ತಿಗೇ ನಂಬಲಾಗಲಿಲ್ಲ. ಪುರುಷರಿಗಿಂತಲೂ ಯಾವುದರಲ್ಲೂ ಕಮ್ಮಿ ಇಲ್ಲ ಎಂಬಂತೆ ಕ್ಯಾಚ್ ಹಿಡಿದ ಭಾರತದ ಆಟಗಾರ್ತಿಯೇ ಅರ್ಚನಾ ದೇವಿ.
ಹೌದು, ಉತ್ತರಪ್ರದೇಶದ ಉನ್ನಾವೋ ಜಿಲ್ಲೆಯ ಫಿರೋಜಾಬಾದ್ನವರಾದ ಅರ್ಚನಾ ದೇವಿ ಇಂದು ಭಾರತ ಕ್ರಿಕೆಟ್ನ ಕಣ್ಮಣಿ. ಫೈನಲ್ ಪಂದ್ಯದಲ್ಲಿ ಪ್ರಮುಖ 2 ವಿಕೆಟ್ ಕಿತ್ತು ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ದೇಶದ ಹೆಮ್ಮೆಯ ಪುತ್ರಿಯ ಈ ವಿಜಯೋತ್ಸವ ಹುಟ್ಟೂರಲ್ಲಿ ಸಂಭ್ರಮ ಕಳೆಕಟ್ಟುವಂತೆ ಮಾಡಿದೆ. ಈ ಎಲ್ಲ ಸಂಭ್ರಮದ ಮಧ್ಯೆ ಅರ್ಚನಾ ದೇವಿಯವರ ಕ್ರಿಕೆಟ್ ಪಯಣ ಮಾತ್ರ ಮುಳ್ಳಿನ ಹಾದಿಯೇ ಸರಿ.
ಅದು 2008. ಮಾರಕ ಕ್ಯಾನ್ಸರ್ ತಂದೆಯನ್ನು ಬಲಿ ಪಡೆದಿತ್ತು. ಮನೆಗೆ ಹಿರಿತಲೆಯೇ ಇಲ್ಲವಾಗಿ ಕುಟುಂಬ ನಲುಗಿತ್ತು. 2017ರಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಮನೆಗೆ ಆಧಾರವಾಗಿದ್ದ ಮಗ ಹಾವು ಕಡಿತದಿಂದ ಸಾವನ್ನಪ್ಪಿದ. ಈ ಎರಡೂ ದುರಂತಗಳು ಅರ್ಚನಾ ದೇವಿಯ ಆತ್ಮಸ್ಥೈರ್ಯವನ್ನೇ ಕಿತ್ತುಕೊಂಡಿದ್ದವು. ಆದರೆ, ತಾಯಿ ಸಾವಿತ್ರಿ ಅವರ ದಿಟ್ಟತನ ಇಂದು ಅರ್ಚನಾ ದೇವಿಯನ್ನು ದೇಶವೊಂದೇ ಅಲ್ಲ, ಕ್ರಿಕೆಟ್ ಜಗತ್ತೇ ಗುರುತಿಸುವಂತೆ ಮಾಡಿದೆ.
ಬದುಕು ಕಸಿದು ಬೆಳಗಿಸಿದ ಕ್ರಿಕೆಟ್:ಚಿಕ್ಕಂದಿನಲ್ಲಿ ಅರ್ಚನಾ ದೇವಿ ಕ್ರಿಕೆಟ್ ಅನ್ನು ಆಯ್ದುಕೊಂಡಾಗ ಕುಟುಂಬ ನಿರಾಕರಿಸಿತು. ಹೆಣ್ಣು ಮಕ್ಕಳು ಕ್ರಿಕೆಟ್ ಆಡುವುದನ್ನು ಕುಚೇಷ್ಟೆ ಮಾಡಿಯಾರು ಎಂಬ ಅಳುಕಿತ್ತು. ಆದರೆ, ತಾಯಿ ಮಾತ್ರ ಆಕೆಯ ಆಸೆಗೆ ನೀರೆರೆದರು. ಕಸ್ತೂರಬಾ ಗಾಂಧಿ ಬಾಲಕಿಯರ ಶಾಲೆಗೆ ಸೇರಿಸಿದರು. ಬಳಿಕ ಮೊರಾದಾಬಾದ್‌ನಲ್ಲಿರುವ ಬಾಲಕಿಯರ ವಸತಿ ಶಾಲೆಯಲ್ಲಿ ಶಿಕ್ಷಣ ಪಡೆದರು. ಬಳಿಕ ಅಲ್ಲಿಯೇ ಕ್ರಿಕೆಟ್ ಜೀವನ ಕುಡಿಯೊಡೆಯಿತು.
ಚಿಕ್ಕಂದಿನಲ್ಲಿ ಮನೆಯ ಮುಂದೆ ಕ್ರಿಕೆಟ್ ಆಡುತ್ತಿದ್ದಾಗ ಅರ್ಚನಾ ಚೆಂಡನ್ನು ಬಲವಾಗಿ ಹೊಡೆದಾಗ ಅದು ಪೊದೆಯೊಳಗೆ ಹೋಯಿತು. ಈ ವೇಳೆ, ಸಹೋದರ ಅದನ್ನು ತರಲು ಪೊದೆಯೊಳಗೆ ಕೈ ಹಾಕಿದಾಗ ಅಲ್ಲಿದ್ದ ಹಾವು ಕಚ್ಚಿದೆ. ವಿಷದಿಂದಾಗಿ ಆತ ಪ್ರಾಣಬಿಟ್ಟ. ಅಕ್ಕನನ್ನು ಕ್ರಿಕೆಟರ್ ಆಗಿ ನೋಡುವುದು ತಮ್ಮನ ಕನಸಾಗಿತ್ತು. ಆದರೆ, ವಿಧಿ ಮಾತ್ರ ಅದನ್ನು ಬದಲಿಸಿತ್ತು. ತಮ್ಮನ ಕೊನೆ ಅಸೆಯಂತೆ ತಾನು ಕ್ರಿಕೆಟರ್ ಆಗಬೇಕೆಂದು ಪಣತೊಟ್ಟ ಅರ್ಚನಾ ಅಂದಿನಿಂದ ಹಿಂತಿರುಗಿ ನೋಡಲಿಲ್ಲ.