ಆಕ್ಲೆಂಡ್(ನ್ಯೂಜಿಲೆಂಡ್):ನ್ಯೂಜಿಲ್ಯಾಂಡ್ಗೆ ಟೆಸ್ಟ್ ಚಾಂಪಿಯನ್ಶಿಪ್ ಪಟ್ಟ ಕಟ್ಟಿದ್ದ ಸವ್ಯಸಾಚಿ ಆಟಗಾರ ಕೇನ್ ವಿಲಿಯಮ್ಸನ್ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಮುಂದಿನ ನಾಯಕನನ್ನಾಗಿ ವೇಗಿ ಟಿಮ್ ಸೌಥಿಯನ್ನು ಕ್ರಿಕೆಟ್ ಮಂಡಳಿ ನೇಮಿಸಿದೆ. ಏಕದಿನ ಮತ್ತು ಟಿ20 ನಾಯಕನಾಗಿ ವಿಲಿಯಮ್ಸನ್ ಮುಂದುವರಿಯಲಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ಸೆಮೀಸ್ನಲ್ಲಿ ಕಿವೀಸ್ ಸೋಲಿನ ಬಳಿಕ ವಿಲಿಯಮ್ಸನ್ ನಾಯಕತ್ವ ಬದಲಾವಣೆ ಕೂಗು ಕೇಳಿಬಂದಿತ್ತು. ಆದರೆ, ಇದಕ್ಕೆ ಸೊಪ್ಪು ಹಾಕದ ಕೇನ್, ಮೂರು ಸ್ವರೂಪದ ಕ್ರಿಕೆಟ್ನಲ್ಲಿ ಆಡಲು ಬಯಸುತ್ತೇನೆ ಎಂದು ತಾವು ನಾಯಕತ್ವದಿಂದ ಹಿಂದೆ ಸರಿಯಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದರು.
ಕಿವೀಸ್ನ ಯಶಸ್ವಿ ನಾಯಕ:ಮಾಜಿ ದಿಗ್ಗಜ ಆಟಗಾರ ಬ್ರೆಂಡನ್ ಮೆಕಲಮ್ 2016 ರಲ್ಲಿ ಟೆಸ್ಟ್ ನಾಯಕತ್ವ ತೆರವು ಮಾಡಿದ ಬಳಿಕ ಜವಾಬ್ದಾರಿ ವಹಿಸಿಕೊಂಡಿದ್ದ ವಿಲಿಯಮ್ಸನ್ ಈವರೆಗೂ 38 ಪಂದ್ಯಗಳಲ್ಲಿ ಆಡಿದ್ದಾರೆ. ಇದರಲ್ಲಿ 22 ಗೆಲುವು, 8 ಡ್ರಾ, 10 ಸೋಲು ಕಂಡಿದ್ದಾರೆ. ಐಸಿಸಿಯ ಚೊಚ್ಚಲ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತವನ್ನು ಸೋಲಿಸಿ ತಂಡವನ್ನು ಚಾಂಪಿಯನ್ ಮಾಡಿದ ಶ್ರೇಯ ಕೇನ್ಗೆ ಸಲ್ಲುತ್ತದೆ. ಅಲ್ಲದೇ, ತಂಡವನ್ನು ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ನಂಬರ್ 1 ಸ್ಥಾನಕ್ಕೆ ತಂದು ಕೂರಿಸಿದ್ದು ಅವರ ಸಾಧನೆಯಾಗಿದೆ.