ದುಬೈ :2014ರಿಂದ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ 2021ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇನ್ನೆಂದು ತಾವೂ ಫ್ರಾಂಚೈಸಿಯೊಂದಿಗೆ ಮೈದಾನದಲ್ಲಿ ಕಾಣಿಸುವುದಿಲ್ಲ ಎಂದು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಖಚಿತ ಪಡಿಸಿದ್ದಾರೆ.
14ನೇ ಆವೃತ್ತಿಯಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿರುವ ವಾರ್ನರ್ ಅವರನ್ನು ಸೋಮವಾರ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ವೇಳೆ ತಂಡದಿಂದ ಹೊರಗಿಡಲಾಗಿತ್ತು. ಅಲ್ಲದೆ ವಾರ್ನರ್ ಪಂದ್ಯದ ವೇಳೆ ಮೈದಾನದಲ್ಲಿ ಎಲ್ಲೂ ಕಾಣಿಸದಿದ್ದದ್ದೂ ಅಭಿಮಾನಿಗಳಿಗೆ ಆಶ್ಚರ್ಯಗೊಳಿಸಿತ್ತು.
ವಾರ್ನರ್ ಈ ವರ್ಷದ ಐಪಿಎಲ್ನಲ್ಲಿ 10 ಪಂದ್ಯಗಳಿಂದ ಕೇವಲ 181 ರನ್ಗಳಿಸಿದ್ದಾರೆ. ಇದು ಅವರ ಐಪಿಎಲ್ನಲ್ಲೇ ಅತ್ಯಂತ ಕನಿಷ್ಠ ಮೊತ್ತ. ಹಾಗಾಗಿ, ನಿನ್ನೆಯ ಪಂದ್ಯದಲ್ಲಿ ಅವರನ್ನು ಡ್ರಾಪ್ ಮಾಡಿ ಇಂಗ್ಲೆಂಡ್ ಓಪನರ್ ಜೇಸನ್ ರಾಯ್ ಅವರನ್ನು ಫ್ರಾಂಚೈಸಿ ಕಣಕ್ಕಿಳಿಸಿತ್ತು. ಈ ಪಂದ್ಯವನ್ನು ಹೈದರಾಬಾದ್ 7 ವಿಕೆಟ್ಗಳಿಂದ ಗೆಲುವು ಸಾಧಿಸಿತ್ತು.
ವಾರ್ನರ್ ಮೈದಾನದಲ್ಲಿ ಕಾಣದ್ದಕ್ಕೆ ಅಭಿಮಾನಿಗಳು ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರಿಸಿರುವ ಆಸೀಸ್ ಸ್ಟಾರ್, ದುರಾದೃಷ್ಟವಶಾತ್ ತಾನು ಇನ್ಮುಂದೆ ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ, ದಯವಿಟ್ಟು ತಂಡವನ್ನು ಬೆಂಬಲಿಸುವುದನ್ನು ಮುಂದುವರಿಸಿ ಎಂದು ವಾರ್ನರ್ ಪ್ರತಿಕ್ರಿಯಿಸಿದ್ದಾರೆ.
ಡೇವಿಡ್ ವಾರ್ನರ್ ಇನ್ಸ್ಟಾಗ್ರಾಮ್ ಪೋಸ್ಟ್ 2014ರಿಂದಲೂ ಫ್ರಾಂಚೈಸಿ ಪರ ಆಡುತ್ತಿರುವ ಅವರು, 2016ರಲ್ಲಿ ಏಕಾಂಗಿ ಪ್ರದರ್ಶನ ತೋರಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. 2018ರಲ್ಲಿ ಬಾಲ್ ಟ್ಯಾಂಪರಿಂಗ್ ಪ್ರಕರಣದಿಂದ ಒಂದು ವರ್ಷ ನಿಷೇಧಕ್ಕೊಳಗಾಗಿ, 2019ರಲ್ಲಿ ಕಮ್ ಬ್ಯಾಕ್ ಮಾಡಿದ್ದರು. ಮತ್ತೆ 2020ರಲ್ಲಿ ತಂಡದ ನಾಯಕತ್ವಕ್ಕೆ ಮರಳಿದ್ದರು.
ಇದೀಗ 8 ವರ್ಷಗಳ ಫ್ರಾಂಚೈಸಿ ಜೊತೆಗಿನ ಸಂಬಂಧ 2021ಕ್ಕೆ ಕೊನೆಯಾಗಲಿದೆ ಎಂದು ಸ್ವತಃ ವಾರ್ನರ್ ತಿಳಿಸಿದ್ದಾರೆ. ಇದೇ ಕಾರಣದಿಂದ ಟೂರ್ನಿ ಮಧ್ಯೆಯೇ ವಾರ್ನರ್ರನ್ನು ನಾಯಕತ್ವದಿಂದ ಕೆಳಗಿಳಿಸಿ ವಿಲಿಯಮ್ಸನ್ರನ್ನು ನಾಯಕನನ್ನಾಗಿ ನೇಮಿಸಲಾಗಿತ್ತು. ಮುಂದಿನ ವರ್ಷ ನಡೆಯಲಿರುವ ಮೆಗಾ ಹರಾಜಿನಲ್ಲಿ ಬೇರೆ ಫ್ರಾಂಚೈಸಿ ತಂಡದ ಪರ ಆಡಲಿದ್ದಾರೆ.
ಇದನ್ನು ಓದಿ:ಡೇವಿಡ್ ವಾರ್ನರ್ ಕಳಪೆ ಪ್ರದರ್ಶನ: ತಲೆದಂಡಕ್ಕೆ ಮುಂದಾದ ಸನ್ರೈಸರ್ಸ್ ಹೈದರಾಬಾದ್