ಬೆಂಗಳೂರು: ಕನ್ನಡಿಗ ರಾಹುಲ್ ದ್ರಾವಿಡ್ ಭಾರತ ತಂಡದ ಕೋಚ್ ಆಗಿ ನೇಮಕಗೊಂಡ ನಂತರ ಖಾಲಿ ಉಳಿದಿದ್ದ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಿದ್ದು, ಕಚೇರಿಯಲ್ಲಿ ತಮ್ಮ ಮೊದಲ ದಿನದ ಫೋಟೋವನ್ನು ಸಾಮಾಜಿಕ ಜಾಲಾತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಟಿ-20 ವಿಶ್ವಕಪ್ ನಂತರ ರವಿಶಾಸ್ತ್ರಿ ಅವರ ಭಾರತ ತಂಡದ ಮುಖ್ಯಕೋಚ್ ಸ್ಥಾನಕ್ಕೆ ರಾಹುಲ್ ದ್ರಾವಿಡ್ ನೇಮಕಗೊಂಡಿದ್ದರು. ಇದೀಗ ಲಕ್ಷ್ಮಣ್ ಎನ್ಸಿಎ ಮುಖ್ಯಸ್ಥ ಸ್ಥಾನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಲಕ್ಷ್ಮಣ್ ಎನ್ಸಿಎ ಮುಖ್ಯಸ್ಥ ಜೊತೆಗೆ ಭಾರತ ಎ, ಭಾರತ ಅಂಡರ್ 19 ಮತ್ತು ಭಾರತ ಅಂಡರ್ 23 ತಂಡಗಳು ಸೇರಿದಂತೆ ಭಾರತೀಯ ಯುವ ಪೀಳಿಗೆಯ ಕ್ರಿಕೆಟಿಗರ ಅಭಿವೃದ್ಧಿಯಲ್ಲೂ ಕಾರ್ಯ ನಿರ್ವಹಿಸಲಿದ್ದಾರೆ.
ಎನ್ಸಿಎ ಕಚೇರಿಯಲ್ಲಿ ಮೊದಲ ದಿನ. ಅತ್ಯಾಕರ್ಷಕ ಹೊಸ ಸವಾಲು ಇಲ್ಲಿದೆ. (ಯುವ ಪೀಳಿಗೆ)ಭವಿಷ್ಯಕ್ಕಾಗಿ ಕೆಲಸ ಮಾಡಲು ಮತ್ತು ಭಾರತೀಯ ಕ್ರಿಕೆಟ್ ಭವಿಷ್ಯದೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಲಕ್ಷ್ಮಣ್ ಕಚೇರಿನಲ್ಲಿ ಕುಳಿತಿರುವ ಫೋಟೋದೊಂದಿಗೆ ಟ್ವೀಟ್ ಮಾಡಿದ್ದಾರೆ.
ರಾಹುಲ್ ದ್ರಾವಿಡ್ ಎನ್ಸಿಎ ಮುಖ್ಯಸ್ಥರಾದ ಮೇಲೆ ಸಾಕಷ್ಟು ಬದಲಾವಣೆ ತಂದಿದ್ದಾರೆ. ಯುವ ಕ್ರಿಕೆಟಿಗರ ಭವಿಷ್ಯ, ಬೆಳವಣಿಗೆಯ ಜೊತೆಗೆ ಆಟಗಾರರ ಫಿಟ್ನೆಸ್ ಬಗ್ಗೆಯೂ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಈ ವ್ಯವಸ್ಥೆಗಳನ್ನು ಯಥಾವತ್ತಾಗಿ ನೋಡಿಕೊಳ್ಳುವುದಕಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಮ್ಮ ಸ್ನೇಹಿತರಾದ ಲಕ್ಷ್ಮಣ್ರನ್ನು ಒತ್ತಾಯ ಮಾಡಿ ಅವರನ್ನು ಎನ್ಸಿಎ ಅಧ್ಯಕ್ಷ ಸ್ಥಾನಕ್ಕೆ ಕೂರಿಸಿದ್ದಾರೆ.
ಇದನ್ನೂ ಓದಿ:ಏಕದಿನ ತಂಡದಲ್ಲಿ ಶಿಖರ್ ಧವನ್ಗೆ ಅವಕಾಶ ನೀಡುವುದರಲ್ಲಿ ಅರ್ಥವಿಲ್ಲ: ಸಬಾ ಕರೀಮ್