ಬೆಂಗಳೂರು: ಇಲ್ಲಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ)ಯಲ್ಲಿ ಏಷ್ಯಾಕಪ್ಗೆ ಭಾರತ ತಂಡ ತಯಾರಿ ನಡೆಸಲಾಗುತ್ತಿದೆ. ಆಗಸ್ಟ್ 30ರಿಂದ ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ಏಷ್ಯಾಕಪ್ 2023 ನಡೆಯಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಸಪ್ಟೆಂಬರ್ 2 ರಂದು ಲಂಕಾದ ಕ್ಯಾಂಡಿ ಮೈದಾನದಲ್ಲಿ ಪಾಕಿಸ್ತಾನದ ಜೊತೆಗೆ ಆಡಲಿದೆ.
ಬೆಂಗಳೂರಿನ ಶಿಬಿರಕ್ಕೆ ಪ್ರಕಟಿತ ಏಷ್ಯಾಕಪ್ ತಂಡದ ಆಟಗಾರರು ಬಂದು ಈಗಾಗಲೇ ಸೇರಿದ್ದಾರೆ. ಅಲ್ಲಿ ಅವರಿಗೆ ಫಿಟ್ನೆಸ್ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಶಿಬಿರದ ಮೊದಲ ದಿನ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ಪರೀಕ್ಷಿಸಲಾಗಿದೆ. ಯೋ-ಯೋ ಪರೀಕ್ಷೆಯಲ್ಲಿ ಎಲ್ಲಾ ಆಟಗಾರರು ಪಾಸ್ ಆಗಿದ್ದಾರೆ. ಬಿಸಿಸಿಐ 16 ಅಂಕವನ್ನು ಯೋ-ಯೋ ಪರೀಕ್ಷೆಗೆ ಸೆಟ್ ಮಾಡಿದೆ.
ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ವಿರಾಟ್ ಕೊಹ್ಲಿ ತಮ್ಮ ಸ್ಕೋರ್ ಅನ್ನು ಇನ್ಸ್ಟಾಗ್ರಾಮ್ನ ಸ್ಟೋರಿಯಲ್ಲಿ ಯೋ-ಯೋ ಟೆಸ್ಟ್ನಲ್ಲಿ 17.2 ಅಂಕ ಸಿಕ್ಕಿರುವುದಾಗಿ ಪೋಸ್ಟ್ ಮಾಡಿದ್ದಾರೆ. ಇದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಒಪ್ಪಂದದ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಹೇಳಲಾಗುತ್ತದೆ. ಈ ಬಗ್ಗೆ ಮಂಡಳಿಯ ಅಧಿಕಾರಿಗಳು ವಿರಾಟ್ ಕೊಹ್ಲಿಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಕೊಹ್ಲಿ ವಿರುದ್ಧವೂ ಕೆಲವು ಕ್ರಮ ಕೈಗೊಳ್ಳಬಹುದು ಎಂದು ಹೇಳಲಾಗುತ್ತಿದೆ.