ಮುಂಬೈ (ಮಹಾರಾಷ್ಟ್ರ):ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಈವರೆಗಿನ ತಮ್ಮ ಶ್ರೇಷ್ಠ ವೃತ್ತಿಜೀವನದ ಬಗ್ಗೆ ಮಾತನಾಡಿದ್ದು, ಇಷ್ಟು ವರ್ಷಗಳ ಕಾಲ ಇಷ್ಟೊಂದು ರನ್ ಮತ್ತು ಶತಕಗಳನ್ನು ಗಳಿಸುತ್ತೇನೆ ಎಂಬ ಯಾವುದೇ ಲೆಕ್ಕಾಚಾರ ನನ್ನಲ್ಲಿ ಇರಲಿಲ್ಲ ಎಂದು ಹೇಳಿದರು. ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ನಲ್ಲಿ ಅದ್ಭುತ ಫಾರ್ಮ್ನಲ್ಲಿರುವ ಕೊಹ್ಲಿ, ಈಗಾಗಲೇ ಕೆಲ ದಾಖಲೆಗಳನ್ನು ಮಾಡಿದ್ದು, ಇನ್ನೂ ಕೆಲವು ದಾಖಲೆಗಳ ಅಂಚಿನಲ್ಲಿದ್ದಾರೆ.
ನವೆಂಬರ್ 2ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ಭಾರತದ ಮುಂದಿನ ಐಸಿಸಿ ಕ್ರಿಕೆಟ್ ವಿಶ್ವಕಪ್ ಪಂದ್ಯ ಆಡಲಿದೆ. ಈಗಾಗಲೇ ತಾನು ಆಡಿರುವ 6 ಪಂದ್ಯಗಳನ್ನು ಗೆದ್ದುಕೊಂಡಿರುವ ಭಾರತ ಇದೇ ರೀತಿ ಅಜೇಯವಾಗಿ ಮುಂದುವರೆದರೆ ನಂ.1 ತಂಡವಾಗಿ ವಿಶ್ವಕಪ್ ಸೆಮೀಸ್ ಪ್ರವೇಶಿಸಲಿದೆ.
ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧ ಉತ್ತಮ ದಾಖಲೆ ಹೊಂದಿದ್ದಾರೆ. ಸಿಂಹಳೀಯರ ವಿರುದ್ಧ 10 ಶತಕ ಗಳಿಸಿರುವ ಕೊಹ್ಲಿ, ನವೆಂಬರ್ 2ರಂದು ನಡೆಯುವ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟುತ್ತಾರಾ? ಎಂಬ ಕುತೂಹಲವಿದೆ.
ಸ್ಟಾರ್ ಸ್ಪೋರ್ಟ್ಸ್ ವಾಹಿನಿಗೆ ಮಾತನಾಡಿದ ವಿರಾಟ್ ಕೊಹ್ಲಿ, "ನಾನು ಕ್ರಿಕೆಟ್ ಬಗ್ಗೆ ಮಾತನಾಡಬೇಕಾದರೆ, ನನ್ನ ವೃತ್ತಿಜೀವನ ಹೀಗೇ ಸಾಗುತ್ತದೆ ಎಂಬುದರ ಬಗ್ಗೆ ಯಾವುದೇ ಕನಸು ಕಂಡಿರಲಿಲ್ಲ. ವೃತ್ತಿಜೀವನದ ಅವಧಿಯಲ್ಲಿ ನಾನು ಇದನ್ನೇ ಮಾಡುತ್ತೇನೆ, ಹೀಗೇ ಮಾಡುತ್ತೇನೆ ಎಂದುಕೊಂಡಿರಲಿಲ್ಲ. ಕ್ರಿಕೆಟ್ನಲ್ಲಿ ನನ್ನ ಜೀವನ ಹೀಗೇ ಸಾಗುತ್ತದೆ ಎಂಭ ಅರಿವಿರಲಿಲ್ಲ. ಯಾರೂ ಕೂಡಾ ಈ ವಿಷಯಗಳನ್ನು ಯೋಜಿಸಲು ಕೂಡಾ ಸಾಧ್ಯವಿಲ್ಲ" ಎಂದರು.
"ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡುವುದು ಮತ್ತು ಕಷ್ಟಕರ ಸಂದರ್ಭಗಳಲ್ಲಿ ತಂಡಕ್ಕಾಗಿ ಪಂದ್ಯಗಳನ್ನು ಗೆಲ್ಲಬೇಕು ಎಂಬುದಕ್ಕೆ ನಾನು ಪೂರ್ಣ ಗಮನ ನೀಡುತ್ತೇನೆ. ಅದಕ್ಕಾಗಿ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದೇನೆ. ಹಿಂದೆ ನನ್ನಲ್ಲಿ ಉತ್ಸಾಹವಿತ್ತು, ಆದರೆ ನನ್ನಲ್ಲಿ ವೃತ್ತಿಪರತೆಯ ಕೊರತೆಯಿತ್ತು. ಈಗ ನಾನು ಆಟವನ್ನು ಹೇಗೆ ಆಡಬೇಕು ಎಂಬುದರ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದೇನೆ. ಮೈದಾನದಲ್ಲಿ ನೂರಕ್ಕೆ ನೂರು ಪ್ರತಿಶತ ಸಾಮರ್ಥ್ಯ ನೀಡಲು ಬಯಸುತ್ತೇನೆ. ಉಳಿದಿದ್ದು ದೇವರ ಕೃಪೆ" ಎಂದು ಹೇಳಿದರು.
ವಿರಾಟ್ ಕೊಹ್ಲಿ ವಿಶ್ವಕಪ್ 2023ರ ಆರು ಪಂದ್ಯಗಳಲ್ಲಿ ಇದುವರೆಗೆ 88.50 ಸರಾಸರಿ ಮತ್ತು 88 ಸ್ಟ್ರೈಕ್ ರೇಟ್‌ನಲ್ಲಿ 354 ರನ್ ಗಳಿಸಿದ್ದಾರೆ. 103* ರನ್ ಇಲ್ಲಿವರೆಗಿನ ಅತ್ಯುತ್ತಮ ಸ್ಕೋರ್. ಮೂರು ಅರ್ಧ ಶತಕ ಗಳಿಸಿದ್ದಾರೆ. ಪ್ರಸಕ್ತ ಸಾಲಿನ ವಿಶ್ವಕಪ್ನಲ್ಲಿ ಇಲ್ಲಿಯವರೆಗಿನ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ 6ನೇ ಆಟಗಾರರಾಗಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್: ಲಯಕ್ಕೆ ಮರಳಿದ ಪಾಕಿಸ್ತಾನಿ ಬೌಲರ್ಗಳು; 204ಕ್ಕೆ ಬಾಂಗ್ಲಾ ಆಲ್ಔಟ್