ಮುಂಬೈ: ಪ್ರವಾಸಿ ನ್ಯೂಜಿಲ್ಯಾಂಡ್ ತಂಡದ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಮುಂಬೈನ ವಾಖೆಂಡೆ ಮೈದಾನದಲ್ಲಿ ಆರಂಭಗೊಂಡಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ನಡೆಸುತ್ತಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ಅನಗತ್ಯ ರೆಕಾರ್ಡ್ ನಿರ್ಮಾಣ ಮಾಡಿದ್ದಾರೆ.
ನ್ಯೂಜಿಲ್ಯಾಂಡ್ ಎಡಗೈ ಸ್ಪಿನ್ನರ್ ಅಜಾಜ್ ಪಟೇಲ್ ಎಸೆದ ಓವರ್ನಲ್ಲಿ ಎಲ್ಬಿ ಬಲೆಗೆ ಬಿದ್ದು, ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ವಿರಾಟ್ ಟೆಸ್ಟ್ ಕ್ರಿಕೆಟ್ನಲ್ಲಿ 10 ಸಲ ಡಕೌಟ್ ಆಗಿರುವ ಭಾರತದ ಮೊದಲ ಕ್ಯಾಪ್ಟನ್ ಎಂಬ ಅಪಖ್ಯಾತಿಗೆ ಪಾತ್ರರಾಗಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ 2021ರಲ್ಲೇ ವಿರಾಟ್ ಕೊಹ್ಲಿ ನಾಲ್ಕು ಸಲ ಶೂನ್ಯಕ್ಕೆ ಔಟಾಗಿದ್ದು, ಒಟ್ಟಾರೆ 10 ಸಲ ಡಕೌಟ್ ಆಗಿರುವ ಅಪಖ್ಯಾತಿಗೆ ಪಾತ್ರರಾಗಿದ್ದಾರೆ. 1983ರಲ್ಲಿ ಕಪಿಲ್ ದೇವ್ 4 ಸಲ, 2011ರಲ್ಲಿ ಎಂಎಸ್ ಧೋನಿ 4 ಸಲ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದು, 1976ರಲ್ಲಿ ಬಿಷನ್ ಬೇಡಿ 4 ಸಲ ಡಕೌಟ್ ಆಗಿದ್ದರು.
ತವರಿನ ಟೆಸ್ಟ್ ಪಂದ್ಯಗಳಲ್ಲೇ ಕೊಹ್ಲಿ ಆರು ಸಲ ಡಕೌಟ್ ಆಗಿದ್ದು, ಮನ್ಸೂರ್ ಅಲಿ ಖಾನ್ ಪಟೌಡಿ 5 ಸಲ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಉಳಿದಂತೆ ಧೋನಿ ಹಾಗೂ ಕಪಿಲ್ ದೇವ್ 3 ಸಲ ವಿಕೆಟ್ ಒಪ್ಪಿಸಿದ್ದಾರೆ.