ಚೆನ್ನೈ (ತಮಿಳುನಾಡು):ವಿರಾಟ್ ಕೊಹ್ಲಿ ಮೈದಾನಕ್ಕಿಳಿದು ಆಟವಾಡಿದರೆ ಒಂದಲ್ಲಾ ಒಂದು ದಾಖಲೆಗಳು ನಿರ್ಮಾಣ ಆಗುತ್ತವೆ. ಬ್ಯಾಟಿಂಗ್ನಲ್ಲಿ ರನ್ ಮಷಿನ್ ಎಂದೇ ಕರೆಯಲ್ಪಡುವ ವಿರಾಟ್ ಈ ಬಾರಿ ಫೀಲ್ಡಿಂಗ್ನಲ್ಲಿ ಕಮಾಲ್ ಮಾಡಿ ಹೊಸ ರೇಕಾರ್ಡ್ನ್ನು ನಿರ್ಮಿಸಿದ್ದಾರೆ. ಕನ್ನಡಿಗ ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಮುರಿದಿದ್ದಾರೆ.
ಏಕದಿನ ವಿಶ್ವಕಪ್‌ನ ಭಾರತದ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಿಡಿದ ಕ್ಯಾಚ್ ದಾಖಲೆಯಾಗಿದೆ. ಐಸಿಸಿ ಪುರುಷರ ಏಕದಿನ ವಿಶ್ವಕಪ್‌ನ ಇತಿಹಾಸದಲ್ಲಿ ದೇಶಕ್ಕಾಗಿ ಅತಿ ಹೆಚ್ಚು ಬಾಲ್ಗಳನ್ನು ಕ್ಯಾಚ್ ಮಾಡಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಭಾಜನರಾಗಿದ್ದಾರೆ. ಈ ದಾಖಲೆಯಲ್ಲಿ ಅನಿಲ್ ಕುಂಬ್ಳೆ ಅವರನ್ನು ಹಿಂದಿಕ್ಕಿದರು. ಜಸ್ಪ್ರೀತ್ ಬುಮ್ರಾ ಎಸೆತದಲ್ಲಿ ಮಿಚೆಲ್ ಮಾರ್ಷ್ ಕ್ಯಾಚ್ ಮಾಡಿದ ಕೊಹ್ಲಿ ಈ ಸಾಧನೆಗೈದಿದ್ದಾರೆ. ಆಸ್ಟ್ರೇಲಿಯಾ ಟಿ20 ತಂಡದ ನಾಯಕ ಮಿಚೆಲ್ ಮಾರ್ಷ್ ಪಂದ್ಯದ ಮೂರನೇ ಓವರ್ನಲ್ಲಿ ಕ್ಯಾಚ್ ಕೊಟ್ಟು ಡಕ್ಗೆ ಔಟ್ ಆದರು.
ಇದಕ್ಕೂ ಮೊದಲು ವಿರಾಟ್ ಕೊಹ್ಲಿ ವಿಶ್ವಕಪ್ ಕ್ಯಾಚ್ನ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ ಜೊತೆಗೆ ಜಂಟಿಯಾಗಿ ಪ್ರಥಮ ಸ್ಥಾನದಲ್ಲಿದ್ದರು. ಈ ಪಂದ್ಯದಲ್ಲಿ ಎರಡು ಕ್ಯಾಚ್ ಮಾಡಿದ ವಿರಾಟ್ 16 ಕ್ಯಾಚ್ ಮೂಲಕ ಈಗ ಪ್ರಥಮ ಸ್ಥಾನದಲ್ಲಿದ್ದಾರೆ. ಕಪಿಲ್ ದೇವ್ ಮತ್ತು ಸಚಿನ್ ತೆಂಡೂಲ್ಕರ್ ತಲಾ 12 ಕ್ಯಾಚ್‌ಗಳೊಂದಿಗೆ ಸಮಬಲದಲ್ಲಿದ್ದಾರೆ.