ಮೆಲ್ಬೋರ್ನ್: ಇತ್ತೀಚೆಗೆ ಭಾರತೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದ 2012ರ ಅಂಡರ್ 19 ವಿಶ್ವಕಪ್ ವಿಜೇತ ತಂಡದ ನಾಯಕ ಉನ್ಮುಕ್ತ್ ಚಾಂದ್ ಆಸ್ಟ್ರೇಲಿಯಾದ ಟಿ20 ಲೀಗ್ ಆದ ಬಿಗ್ಬ್ಯಾಷ್ ಲೀಗ್ನಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಪರ ಆಡಲಿದ್ದಾರೆ. ಈ ಮೂಲಕ ಐಪಿಎಲ್ ನಂತರದ ಶ್ರೇಷ್ಠ ಲೀಗ್ ಆಗಿರುವ ಬಿಬಿಎಲ್ನಲ್ಲಿ ಆಡಲಿರುವ ಭಾರತದ ಮೊದಲ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ.
ಈಗಾಗಲೇ ಭಾರತ ಮಹಿಳಾ ತಂಡದ ಸ್ಟಾರ್ಗಳಾದ ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂಧಾನ, ಶೆಫಾಲಿ ವರ್ಮಾ, ಜಮೀಮಾ ರೋಡ್ರಿಗಸ್ ಸೇರಿದಂತೆ 8 ಮಂದಿ WBBL ಲೀಗ್ನಲ್ಲಿ ಆಡುತ್ತಿದ್ದಾರೆ. ಆದರೆ ವಿದೇಶಿ ಟಿ20 ಲೀಗ್ಗಳಲ್ಲಿ ಆಡುವುದಕ್ಕೆ ಪುರುಷರಿಗೆ ಅವಕಾಶವಿಲ್ಲ,ಆದರೆ ಚಾಂದ್ ನಿವೃತ್ತಿ ಘೋಷಿಸಿರುವುದರಿಂದ ಬಿಬಿಎಲ್ನಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಅವರು ಆ್ಯರೋನ್ ಫಿಂಚ್ ನಾಯಕರಾಗಿರುವ ಮೆಲ್ಬೋರ್ನ್ ರೆನಿಗೇಡ್ಸ್ ತಂಡವನ್ನು ತಂಡದ ಪರ 2021ರ ಆವೃತ್ತಿಯಲ್ಲಿ ಆಡಲಿದ್ದಾರೆ.
ದೇಶಿ ಕ್ರಿಕೆಟ್ ಹಾಗೂ ಐಪಿಎಲ್ನಲ್ಲಿ ಸೂಕ್ತ ಅವಕಾಶ ಸಿಗದ ಕಾರಣ 28 ವರ್ಷದ ಉನ್ಮುಕ್ತ್ ಚಾಂದ್ ಅಮೆರಿಕಾ ತಂಡವನ್ನು ಪ್ರತಿನಿಧಿಸುವ ಉದ್ದೇಶದಿಂದ ಇದೇ ವರ್ಷ ಭಾರತೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಭಾರತಕ್ಕೆ ಕಿರಿಯರ ವಿಶ್ವಕಪ್ ಗೆದ್ದುಕೊಟ್ಟಿದ್ದ ವಿರಾಟ್ ಕೊಹ್ಲಿ, ಪೃಥ್ವಿ ಶಾ ಅವರಂತೆ ಚಾಂದ್ ಭಾರತೀಯ ಕ್ರಿಕೆಟ್ನಲ್ಲಿ ಹೆಸರುವಾಸಿಯಾಗಲು ವಿಫಲರಾದರು. ನಂತರ ಐಪಿಎಲ್, ದೇಶಿ ಕ್ರಿಕೆಟ್ನಲ್ಲಿ ಅವಕಾಶ ವಂಚಿತನಾದ ದೆಹಲಿ ಬ್ಯಾಟರ್ ಕೊನೆಗೆ ಉಳಿದಿರುವ ಕೆಲವು ವರ್ಷಗಳಲ್ಲಿ ಕ್ರಿಕೆಟ್ನಲ್ಲಿ ತೊಡಗಿಸಿಕೊಳ್ಳುವುದಕ್ಕಾಗಿ ಅಮೆರಿಕಾಗೆ ವಲಸೆ ಹೋಗಿದ್ದಾರೆ.
ಇನ್ನು ತಮಗೆ ಬಿಬಿಎಲ್ನಲ್ಲಿ ಆಡುವುದಕ್ಕೆ ಅವಕಾಶ ಸಿಕ್ಕಿರುವುದರ ಬಗ್ಗೆ ಪ್ರತಿಕ್ರಿಯಿಸಿರುದ ಚಾಂದ್ " ಮೆಲ್ಬೋರ್ನ್ ರೆನಿಗೇಡ್ಸ್ ಕುಟುಂಬದ ಭಾಗವಾಗಿರಲು ಹೆಮ್ಮೆಯಾಗುತ್ತಿದೆ. ಬಿಗ್ ಬ್ಯಾಷ್ ಲೀಗ್ ಟೂರ್ನಮೆಂಟ್ಅನ್ನು ನಾನು ಯಾವಾಗಲೂ ನೋಡುತ್ತಿದ್ದೆ. ಇದೀ ಈ ಪ್ರತಿಷ್ಠಿತ ಲೀಗ್ನಲ್ಲಿ ಆಡುವುದಕ್ಕೆ ಒಂದು ಅವಕಾಶ ಸಿಕ್ಕಿದೆ. ಮೆಲ್ಬೋರ್ನ್ಗೆ ಬಂದು ಟೂರ್ನಿಯಲ್ಲಿ ಪಾಲ್ಗೊಳ್ಳಲು ತುದಿಗಾಲಿನಲ್ಲಿ ಇದ್ದೇನೆ. ಮೆಲ್ಬೋರ್ನ್ಗೆ ನಾನು ಭೇಟಿ ಕೊಟ್ಟಿಲ್ಲ. ಇಲ್ಲಿ ಬಹಳಷ್ಟು ಭಾರತೀಯರಿದ್ದಾರೆ ಎಂದು ತಿಳಿದಿದ್ದೇನೆ, ನಮ್ಮ ಪಂದ್ಯಗಳಿಗೆ ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಬರುತ್ತಾರೆಂದು ಭಾವಿಸಿದ್ಧೇನೆ " ಎಂದು ಹೇಳಿದ್ದಾರೆ.
ಇದನ್ನು ಓದಿ:ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕ; ನಾರಾಯಣಗೌಡ ಅಭಿನಂದನೆ