ಸೆಂಚುರಿಯನ್ (ದಕ್ಷಿಣ ಆಫ್ರಿಕಾ): ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ವಿರುದ್ಧದ ಸವಾಲಿನ ಬಗ್ಗೆ ದಕ್ಷಿಣ ಆಫ್ರಿಕಾದ ನಾಯಕ ತೆಂಬಾ ಬವುಮಾ ಅವರು ಮಾತನಾಡಿದ್ದಾರೆ. ಭಾರತದ ಪ್ರಬಲ ಬೌಲಿಂಗ್ ಪಡೆಯು ನಮ್ಮ ತಂಡಕ್ಕೆ ತವರಿನ ಅಂಗಳದಲ್ಲಿನ ಅನುಭವವನ್ನೂ ಕೂಡ ಶೂನ್ಯವಾಗಿಸುವ ಸಾಮರ್ಥ್ಯ ಹೊಂದಿದೆ ಎಂದು ಬವುಮಾ ಅಭಿಪ್ರಾಯಪಟ್ಟಿದ್ದಾರೆ.
ನಾಳಿನ ಬಾಕ್ಸಿಂಗ್ ಡೇ ಟೆಸ್ಟ್ಗೂ ಮುನ್ನ ಪ್ರತಿಕ್ರಿಯಿಸಿರುವ ಹರಿಣಗಳ ತಂಡದ ನಾಯಕ, 'ಮೊಹಮ್ಮದ್ ಸಿರಾಜ್, ಜೆರಾಲ್ಡ್ ಕೋಟ್ಜಿ, ಜಸ್ಪ್ರೀತ್ ಬುಮ್ರಾ ಮತ್ತು ಕಗಿಸೊ ರಬಾಡರಂತಹ ಬೌಲರ್‌ಗಳು ಸೆಂಚೂರಿಯನ್ ಅಂಗಳದಲ್ಲಿ ಪ್ರಭಾವ ತೋರಲಿದ್ದಾರೆ. ಬ್ಯಾಟರ್‌ಗಳು ಇಂತಹ ಬೌಲರ್ಗಳ ಸವಾಲು ಎದುರಿಸಿ ಆಡಬೇಕಿದೆ. ನಮಗೆ ಇಲ್ಲಿನ ಪರಿಸ್ಥಿತಿಯ ಅರಿವಿದೆ. ಪಿಚ್ಗೆ ಉತ್ತಮವಾಗಿ ಹೊಂದಿಕೊಳ್ಳುತ್ತೇವೆಂಬ ನಿರೀಕ್ಷೆ ಹೊಂದಿದ್ದೇವೆ. ಆದರೆ, ಭಾರತದ ಬೌಲಿಂಗ್ ಸಾಕಷ್ಟು ಪ್ರಬಲವಾಗಿದೆ. ಬೌಲರ್ಗಳಿಂದಲೇ ಇಷ್ಟೊಂದು ಯಶಸ್ಸು ಸಾಧಿಸಿದ್ದಾರೆ. ಬ್ಯಾಟರ್‌ಗಳು ಸವಾಲನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದರ ಮೇಲೆ ಯಶಸ್ಸು ಅಡಗಿದೆ ಎಂದರು.
ಮೈದಾನದಲ್ಲಿ ನಾವು ತೋರುವ ಕೌಶಲ್ಯವು ಪ್ರಮುಖ ಅಂಶವಾಗಿದೆ. ಬ್ಯಾಟರ್ ಆಗಿ ನನಗೆ, ಭಾರತದ ಬೌಲರ್‌ಗಳು ಒತ್ತಡಕ್ಕೆ ಸಿಲುಕಿಸಲು ಯತ್ನಿಸಲಿದ್ದಾರೆ. ಜೊತೆಗೆ ಅವರ ಬ್ಯಾಟಿಂಗ್ ಕ್ರಮಾಂಕವೂ ಸಹ ಬಲಿಷ್ಠವಾಗಿದೆ. ಕೆಲ ಖ್ಯಾತ ಟೆಸ್ಟ್ ಆಟಗಾರರಿದ್ದು, ಎಲ್ಲಾ ಪರಿಸ್ಥಿತಿಗಳಲ್ಲಿ ಪ್ರದರ್ಶನ ತೋರಿದ ಹುಡುಗರೂ ಇದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಕಣಕ್ಕಿಳಿಯಲಿದ್ದಾರೆ. ಹೀಗಾಗಿ, ಹೆಚ್ಚುವರಿ ಪ್ರೇರಣೆಯೊಂದಿಗೆ ನಾವು ಅತ್ಯುತ್ತಮ ಪ್ರದರ್ಶನ ತೋರಲು ಬಯಸುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಭಾರತದ ವಿರುದ್ಧ ತವರಿನಲ್ಲಿ ಅಜೇಯ ದಾಖಲೆಯ ಬಗ್ಗೆ ಮಾತನಾಡಿದ ಬವುಮಾ, ದಕ್ಷಿಣ ಆಫ್ರಿಕಾದ ತಂಡವಾಗಿ ಈ ದಾಖಲೆ ಕಾಪಾಡಿಕೊಂಡಿರುವುದು ಎಲ್ಲ ಆಟಗಾರರಿಗೂ ಬಹಳ ಹೆಮ್ಮೆ ಇದೆ. ಆದರೆ, ಭಾರತದ ವಿರುದ್ಧ ಆಡುವಾಗ ಕೆಲ ಸವಾಲು ಎದುರಿಸಲು ಸಿದ್ಧರಾಗಿರಬೇಕು. ಅದರ ಬಗ್ಗೆ ನಮ್ಮ ತಂಡ ಗಮನ ಹರಿಸಲಿದೆ ಎಂದು ಬವುಮಾ ಹೇಳಿದರು.