ದುಬೈ: ಯುಎಇಯಲ್ಲಿ ನಡೆಯಲಿರುವ 2021ರ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಫೈನಲ್ ಪ್ರವೇಶಿಸಲಿರುವ ನನ್ನ ನೆಚ್ಚಿನ ತಂಡಗಳು ಎಂದು ಭಾರತದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಭವಿಷ್ಯ ನುಡಿದಿದ್ದಾರೆ. ಅಕ್ಟೋಬರ್- ನವೆಂಬರ್ ನಡುವೆ ಟಿ20 ವಿಶ್ವಕಪ್ ನಡೆಯಲಿದೆ. ಮೊದಲಿಗೆ 8 ತಂಡಗಳ ಅರ್ಹತಾ ಪಂದ್ಯಗಳು ನಡೆಯಲಿವೆ. ನಂತರ ಸೂಪರ್ 12 ಪಂದ್ಯಾವಳಿಗಳು ನಡೆಯಲಿವೆ.
"ಯಾರು ಗೆಲ್ಲಲಿದ್ದಾರೆ ಎನ್ನುವುದರ ಬಗ್ಗೆ ನಾನು ಹೇಳಲಾಗುವುದಿಲ್ಲ. ಆದರೆ, ನಾನು ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಫೈನಲ್‌ನಲ್ಲಿ ನೋಡಲು ನಾನು ಇಷ್ಟಪಡುತ್ತೇನೆ. ಭಾರತದ ನಂತರ ನನ್ನ ಎರಡನೇ ನೆಚ್ಚಿನ ತಂಡವೆಂದರೆ ಖಂಡಿವಾಗಿಯೂ ವೆಸ್ಟ್ ಇಂಡೀಸ್ ಆಗಿರುತ್ತದೆ. ಅವರು ಕ್ರಿಕೆಟ್ ಆಡುವುದು ಸಾಮರ್ಥ್ಯದಿಂದ ಮಾತ್ರ, ಅದರಲ್ಲೂ ಈ ಮಾದರಿಯಲ್ಲಿ ಅವರು ತುಂಬಾ ಇಷ್ಟವಾಗುತ್ತಾರೆ. ಆದ್ದರಿಂದ ಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ಅನ್ನು ನೋಡಲು ನಾನು ಇಷ್ಟಪಡುತ್ತೇನೆ" ಎಂದು ಕಾರ್ತಿಕ್ ಹೇಳಿದ್ದಾರೆ.
ಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ತಂಡವೇ ಗೆಲ್ಲಬೇಕೆಂದು ನಾನು ಬಯಸುತ್ತೇನೆ. ಆದರೆ, ಅದು ಫೈನಲ್‌ನಲ್ಲಿ ಎದುರಾಳಿ ಯಾವುದು ಎನ್ನುವುದರ ಮೇಲೆ ಅವಲಂಭಿತವಾಗಿರುತ್ತದೆ. ಸದ್ಯಕ್ಕೆ ನಾನು ಭಾರತ ಮತ್ತು ವೆಸ್ಟ್ ಇಂಡೀಸ್ ಫೈನಲ್ ಪ್ರವೇಶಿಸಬೇಕೆಂಬುದಕ್ಕೆ ಮಾತ್ರ ಅಂಟಿಕೊಳ್ಳುತ್ತೇನೆ. ಈ ಟಿ20 ವಿಶ್ವಕಪ್‌ನಲ್ಲಿ ಸದ್ಯಕ್ಕೆ ಇವೆರಡು ನನ್ನ ನೆಚ್ಚಿನ ತಂಡಗಳು ಎಂದು ಐಸಿಸಿ ಡಿಜಿಟಲ್ ಶೋನಲ್ಲಿ ಕಾರ್ತಿಕ್ ಹೇಳಿದ್ದಾರೆ.