ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 14ರ ಆಟಗಾರರ ಹರಾಜಿನ ಪ್ರಕ್ರಿಯೆ ದೃಷ್ಟಿಯಿಂದ ಈ ಬಾರಿಯ ಮುಷ್ತಾಕ್ ಅಲಿ ಟ್ರೋಫಿಯನ್ನು ರಣಜಿ ಟ್ರೋಫಿಗಿಂತ ಮೊದಲೇ ಆರಂಭಿಸುವ ಕುರಿತು ಬಿಸಿಸಿಐ ಚಿಂತನೆ ನಡೆಸಿದೆ.
ಕನಿಷ್ಠ ಮೂರು ತಂಡಗಳನ್ನು ಸುರಕ್ಷಿತವಾಗಿಡಬಲ್ಲ ಹಲವು ಮೈದಾನಗಳು ಮತ್ತು ಪಂಚತಾರಾ ಹೋಟೆಲ್ಗಳನ್ನು ಹೊಂದಿರುವ ಕೆಲವು ರಾಜ್ಯ ಸಂಸ್ಥೆಗಳಿಗೆ ಬಿಸಿಸಿಐ ಈಗಾಗಲೇ ಸೂಚನೆ ನೀಡಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಈ ಕುರಿತು ಮಾತನಾಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, ಈಗಾಗಲೇ ಹತ್ತು ರಾಜ್ಯ ಸಂಸ್ಥೆಗಳನ್ನು ಸಂಪರ್ಕಿಸಲಾಗಿದೆ. ಜೀವ ಸುರಕ್ಷಾ ವಲಯವನ್ನು ನಿರ್ವಹಿಸಿಕೊಂಡು, ಎರಡು ವಾರಗಳ ಅವಧಿಯಲ್ಲಿ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯನ್ನು ಆಯೋಜಿಸಲು ಸಾಧ್ಯವೇ ಎಂದು ಪರಿಶೀಲಿಸಲಾಗುತ್ತಿದೆ. ಅದು ಮುಗಿದ ಕೂಡಲೇ ರಣಜಿ ಟ್ರೋಫಿ ಟೂರ್ನಿಗೆ ಚಾಲನೆ ನೀಡಬಹುದಾಗಿದೆ ಎಂದಿದ್ದಾರೆ.
ಅಲ್ಲದೆ, ಈ ಮನವಿಗೆ ಕನಿಷ್ಠ 6 ಸಂಸ್ಥೆಗಳು ಸಮ್ಮತಿ ಸೂಚಿಸಿದರೆ 2 ವಾರಗಳಲ್ಲಿ ಮುಷ್ತಾಕ್ ಅಲಿ ಟ್ರೋಫಿ ನಡೆಸಿ ಬಳಿಕ ರಣಜಿ ನಡೆಸುವ ಚಿಂತನೆ ಇದೆ ಎಂದಿದ್ದಾರೆ.