ಏಷ್ಯಾಕಪ್ ಮತ್ತು ವಿಶ್ವಕಪ್ಗೂ ಮುನ್ನ ಬೆರಳೆಣಿಕೆಯ ಏಕದಿನ ಪಂದ್ಯಗಳನ್ನು ಆಡಲಿರುವ ಭಾರತ ತಂಡ ಇನ್ನೂ ಆರಂಭಿಕರಿಂದ ಹಿಡಿದು ಬೌಲರ್ಗಳ ವರೆಗೆ ಸ್ಥಾನ ಪ್ರಯೋಗ ನಡೆಸುತ್ತಲೇ ಇದೆ. ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಪ್ರಸ್ತುತ ಸರಣಿಯಲ್ಲಿ ಕೋಚ್ ರಾಹುಲ್ ದ್ರಾವಿಡ್ ಅನೇಕ ಪ್ರಯೋಗಗಳನ್ನು ತಂಡದಲ್ಲಿ ಮಾಡುತ್ತಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬ್ಯಾಟಿಂಗ್ ಸ್ಥಾನವನ್ನು ಯುವ ಆಟಗಾರರಿಗೆ ಬಿಟ್ಟುಕೊಟ್ಟರೆ, ಎರಡನೇ ಪಂದ್ಯದಲ್ಲಿ ತಂಡದಿಂದ ಹೊರಗುಳಿದು ಮಿಕ್ಕಿಬ್ಬರು ಆಟಗಾರರಿಗೆ ಅವಕಾಶ ಮಾಡಿಕೊಟ್ಟಿದ್ದರು.
ವಿಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಟಿ20 ಸ್ಕೋರ್ ಇದ್ದರೂ 5 ವಿಕೆಟ್ ಕಳೆದುಕೊಂಡು ಭಾರತ ಜಯ ಸಾಧಿಸಿತು. ಎರಡನೇ ಏಕದಿನದಲ್ಲಿ 181 ರನ್ಗೆ ಸರ್ವಪತನ ಕಂಡ ಪಡೆ ಸೋಲುನುಭವಿಸಿತ್ತು. ಅನೇಕ ಸೀರೀಸ್ಗಳಿಂದ ಹೊರಗುಳಿದು ಕ್ರಿಕೆಟ್ ಅಭಿಮಾನಿಗಳ ಆಕ್ರೋಶದ ನಂತರ ತಂಡ ಆಯ್ಕೆ ಆದ ಸಂಜು ಸ್ಯಾಮ್ಸನ್ ಎರಡನೇ ಏಕದಿನ ಪಂದ್ಯದಲ್ಲಿ ಸಿಕ್ಕ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಮತ್ತು ಅವಕಾಶವನ್ನು ಬಳಸಿಕೊಳ್ಳುವಲ್ಲಿ ಎಡವಿದರು.
ಇನ್ನು ಟಿ20 ಟಾಪ್ ಶ್ರೇಯಾಂಕಿತ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಎರಡು ಪಂದ್ಯದಲ್ಲೂ ಯಶಸ್ಸು ಕಾಣಲಿಲ್ಲ. ಆದರೆ ಅವರ ಬಗ್ಗೆ ಕೋಚ್ ದ್ರಾವಿಡ್ಗೆ ಇನ್ನೂ ಭರವಸೆ ಇದೆ. ಇವರ ಜೊತೆಗೆ ಐಪಿಎಲ್ನಲ್ಲಿ ಆರೆಂಜ್ ಕ್ಯಾಪ್ ಗೆದ್ದಿದ್ದ ಶುಭಮನ್ ಗಿಲ್ ಸಹ ವೈಫಲ್ಯತೆ ಎದುರಿಸುತ್ತಿದ್ದಾರೆ. ಟೆಸ್ಟ್ನಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಗಿಲ್ ರನ್ ಗಳಿಸಲು ಪರದಾಡಿದರೆ, ಏಕದಿನ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದರೂ ಭರ್ಜರಿ ಸ್ಕೋರ್ ಗಳಿಸುತ್ತಿಲ್ಲ. ಐಪಿಎಲ್ ನಂತರ ಆಡಿದ 7 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಗಿಲ್ 150 ಪ್ಲೆಸ್ ರನ್ ಗಳಿಸಿದ್ದಾರೆ ಅಷ್ಟೇ. ಅದರಲ್ಲಿ ವಿಂಡೀಸ್ ವಿರುದ್ಧದ ಎರಡನೇ ಏಕದಿನದಲ್ಲಿ 34 ರನ್ ಗಳಿಸಿದ್ದೇ ಅವರ ಗರಿಷ್ಟ ಸ್ಕೋರ್ ಆಗಿದೆ.