ಚೆನ್ನೈ(ತಮಿಳುನಾಡು):ದುರಾದೃಷ್ಟವೋ, ಕೆಟ್ಟ ಬ್ಯಾಟಿಂಗ್ ಕೌಶಲ್ಯವೋ? ಒಟ್ಟಿನಲ್ಲಿ ಟಿ20 ಕ್ರಿಕೆಟ್ನ ನಂಬರ್ 1 ಬ್ಯಾಟರ್ ಸೂರ್ಯಕುಮಾರ್ ಏಕದಿನ ಮಾದರಿಯಲ್ಲಿ ನೆಲಕಚ್ಚಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಸರಣಿಯ ಮೂರು ಪಂದ್ಯಗಳಲ್ಲಿ ಸತತ ಸೊನ್ನೆ ಸುತ್ತುವ ಮೂಲಕ ಅತೀ ಕೆಟ್ಟ ದಾಖಲೆ ನಿರ್ಮಿಸಿದ್ದಾರೆ. ಸರಣಿಯೊಂದರಲ್ಲಿ ಸತತವಾಗಿ ಮೊದಲ ಎಸೆತದಲ್ಲೇ ಔಟಾದ 6ನೇ ಬ್ಯಾಟರ್ ಎಂಬ ಅಪಖ್ಯಾತಿಗೂ ಒಳಗಾದರು.
ಟಿ20 ಕ್ರಿಕೆಟ್ನಲ್ಲಿ ಅದ್ಭುತ ಲಯದಲ್ಲಿರುವ ಸೂರ್ಯಕುಮಾರ್ ಯಾದವ್ ಏಕದಿನ ಮಾದರಿಯಲ್ಲೂ ಅದೇ ಖದರ್ ತೋರಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ಪೂರ್ಣ ವೈಫಲ್ಯ ಅನುಭವಿಸಿದರು. ವಿಶ್ವಕಪ್ ತಂಡದಲ್ಲಿ ಸ್ಥಾನ ಮತ್ತು ಹೆಚ್ಚಿನ ನಿರೀಕ್ಷೆ ಹೊಂದಿದ್ದ ಆಟಗಾರರಲ್ಲಿ ಸೂರ್ಯಕುಮಾರ್ ಒಬ್ಬರಾಗಿದ್ದರು. ಆದರೆ, ಅವರ ಈಗಿನ ಪ್ರದರ್ಶನ ತಂಡಕ್ಕೆ ಚಿಂತೆಗೀಡು ಮಾಡಿದೆ.
ಸಚಿನ್ ಪಟ್ಟಿ ಸೇರ್ಪಡೆ:ವಿಶ್ವಕಪ್ ಸಿದ್ಧತಾ ಭಾಗವಾಗಿ ನಡೆದ ಆಸೀಸ್ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಪ್ರಮುಖ ಪಾತ್ರ ನಿರ್ವಹಿಸಿ ತಾವು ಏಕದಿನಕ್ಕೂ ಸಿದ್ಧ ಎಂಬುದನ್ನು ಸಾಬೀತುಪಡಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಸರಣಿಯಲ್ಲಿ ಮುಗ್ಗರಿಸಿದ ಆಟಗಾರ, ಮೂರೂ ಪಂದ್ಯಗಳಲ್ಲೂ ತಾವು ಎದುರಿಸಿದ ಮೊದಲ ಎಸೆತದಲ್ಲೇ ಔಟಾಗಿ ಅತಿ ಕೆಟ್ಟ ಪ್ರದರ್ಶನ ನೀಡಿದರು.
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಮೊದಲ ಏಕದಿನದಲ್ಲಿ ಬ್ಯಾಟ್ ಬೀಸಲು ಬಂದ ಸೂರ್ಯಕುಮಾರ್ ಯಾದವ್ಗೆ ಮೊದಲ ಎಸೆತದಲ್ಲೇ ಆಸೀಸ್ ಉರಿ ಚೆಂಡಿನ ವೇಗಿ ಮಿಚೆಲ್ ಸ್ಟಾರ್ಕ್ ಎಲ್ಬಿ ಬಲೆಗೆ ಬೀಳಿಸಿದ್ದರು. ಇದಾದ ಬಳಿಕ ವಿಶಾಖಪಟ್ಟಣಂನಲ್ಲಿ ನಡೆದ 2ನೇ ಪಂದ್ಯದಲ್ಲಿ ಸೂರ್ಯನನ್ನು ಮತ್ತೆ ಕಾಡಿ ಮಿಚೆಲ್ ಸ್ಟಾರ್ಕ್ ಎಲ್ಬಿ ಮಾಡುವ ಮೂಲಕ ಮೊದಲ ಎಸೆತದಲ್ಲೇ ಔಟ್ ಮಾಡಿದ್ದರು. ಇದರಿಂದ ಸೂರ್ಯಕುಮಾರ್ ಬ್ಯಾಟಿಂಗ್ ಕ್ರಿಕೆಟ್ ವಲಯದಲ್ಲಿ ಟೀಕೆಗೆ ಗುರಿಯಾಗಿತ್ತು.